ಸುಗಮ ಸಂಚಾರಕ್ಕೆ ಅಗತ್ಯ ನಿಯಮಗಳನ್ನು ಪಾಲಿಸಿ : ಮಾಧವ ಗಿತ್ತೆ

ಅಥಣಿ : ಆ.26:ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮಾಲೀಕರು ತಮ್ಮ ತಮ್ಮ ವಸ್ತುಗಳನ್ನು ಅಂಗಡಿಯ ಹೊರಗೆ ರಸ್ತೆಯ ಮೇಲೆ ಇಡುತ್ತಿರುವ ಪರಿಣಾಮ ಸಂಚಾರಕ್ಕೆ ಅಡತಡೆ ಉಂಟಾಗುತ್ತಿದ್ದು ವಿಶೇಷವಾಗಿ ಮಹಿಳೆಯರು, ವೃದ್ಧರು ಕಷ್ಟಪಡುವಂತಾಗಿದ್ದರಿಂದ ಎಲ್ಲರೂ ಸುಗಮ ಸಂಚಾರಕ್ಕಾಗಿ ಅಗತ್ಯ ನಿಯಮಗಳನ್ನು ಪಾಲಿಸಬೇಕು ಎಂದು ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಹೇಳಿದರು.
ಅವರು ಅಥಣಿ ಪಟ್ಟಣದ ವ್ಯಾಪ್ತಿಯಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗುವ ನಿಟ್ಟಿನಲ್ಲಿ ಪಟ್ಟಣದ ಎಮ್.ಜಿ.ಮಾರುಕಟ್ಟೆ, ಮುಖ್ಯರಸ್ತೆ, ಕೆರೆ ಸೇರಿದಂತೆ ಅನೇಕ ವ್ಯಾಪಾರಿ ಕೇಂದ್ರಗಳಿಗೆ ಭೇಟಿ ನೀಡಿ ಅಂಗಡಿಕಾರರಿಗೆ ತಿಳಿ ಹೇಳಿ ಮಾತನಾಡುತ್ತಿದ್ದರು. ಮಾರುಕಟ್ಡೆ ಪ್ರದೇಶದಲ್ಲಿ ಸಹಜವಾಗಿಯೇ ಜನದಟ್ಟಣೆ ಇರುತ್ತದೆ, ಅಂಗಡಿಕಾರರು ಸಹಕರಿಸಬೇಕು ಇಲ್ಲವಾದರೆ
ಅಗತ್ಯ ಕ್ರಮ ಜರುಗಿಸುತ್ತೇವೆ ಎಂದ ಅವರು
ಅಂಗಡಿಗಳ ಮುಂದೆ ಎರಡೂ ರಸ್ತೆಗಳ ಬದಿಗಳಲ್ಲಿ ಕಾಯಿ ಪಲ್ಲೆ ಮಾರಾಟಗಾರರು ಕೂಡ ಕೆಳಗೆ ಕುಳಿತು ವ್ಯಾಪಾರ ಮಾಡುವವರಿಗೂ ಅನಕೂಲವಾಗುವ ನಿಟ್ಟಿನಲ್ಲಿ ನಿರ್ಧಿಷ್ಟ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳಲ್ಲಿ ಬಣ್ಣದಿಂದ ಗೆರೆ ಹಾಕಿ ಅವರಿಗೆ ಅನುಕೂಲವಾಗುವಂತೆ ಮಾಡುತ್ತೇವೆ ಕಾಯಿ ಪಲ್ಲೆ ಮಾರಾಟಗಾರರು ಅದೇ ಸ್ಥಳದಲ್ಲಿಯೇ ಮಾರಾಟ ಮಾಡಲು ಸೂಚಿಸುತ್ತೇವೆ ಎಂದ ಅವರು ಇದರ ಜೊತೆಗೆ ಮುಖ್ಯ ಮಾರುಕಟ್ಟೆ ರಸ್ತೆಯಲ್ಲಿ ಸರಕು ಇಳಿಸುವ ವ್ಯವಸ್ಥೆಗೂ ಕೂಡ ಸಮಯ ನಿಗದಿ ಪಡಿಸುತ್ತೇವೆ ಎಂದರು.
ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮಾತನಾಡಿ, ಉಪ ವಿಭಾಗಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಥಣಿ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ನಿಯಮಗಳನ್ನು ಒಂದು ವಾರದ ಅವಧಿಯಲ್ಲಿ ರೂಪಿಸಲಾಗುವುದು ಹೀಗಾಗಿ ವ್ಯಾಪಾರಸ್ಥರು, ಸಾರ್ವಜನಿಕರು ಹಾಗೂ ಅಂಗಡಿಕಾರರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಭಿಯಂತರ ಎಮ್.ಎಚ್.ದೊಡಮನಿ, ಆರೋಗ್ಯ ಅಧಿಕಾರಿ ರವೀಂದ್ರ ಸಮಗೊಂಡ ಸೇರಿದಂತೆ ಪುರಸಭೆಯ ಸಿಬ್ಬಂದಿ ಉಪಸ್ಥಿತರಿದ್ದರು.