ಸುಗಮ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ

ಧಾರವಾಡ,ನ4 : ಸಂಗೀತ ಭಾಷೆ ಪ್ರಧಾನವಲ್ಲ, ಅದು ಭಾವ ಪ್ರಧಾನ. ಸಂಗೀತದ ಒಂದೊಂದು ರಾಗಗಳಲ್ಲಿ ವಿವಿಧ ರೋಗಗಳನ್ನು ತಡೆಯುವ ಶಕ್ತಿ ಇದೆ ಎಂಬುದನ್ನು ವೈಜ್ಞಾನಿಕವಾಗಿ ಸಂಶೋಧಿಸಲಾಗಿದೆ ಎಂದು ಕ.ವಿ.ವ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಮಹೇಶ ಹೊರಕೇರಿ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, 67ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಬಾಲಬಳಗ ಮಕ್ಕಳ ಹಾಡುಗಾರಿಕೆ ಹಾಗೂ ಶ್ರೀ ನಿಧಿ ಕೆ.ಎಂ. ಮತ್ತು ಶ್ರೇಯಶ್ರೀ ಬಳ್ಳಾರಿ ಅವರ ಸುಗಮ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಸಂಗೀತದ ಸಪ್ತ ಸ್ವರದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಅದಮ್ಯತೆ ಇದೆ. ಮಕ್ಕಳ ಬಾಲ್ಯಾವಸ್ಥೆಯಲ್ಲಿಯೇ ಸಂಗೀತ, ಸಾಹಿತ್ಯ ಹಾಗೂ ವಿವಿಧ ಕಲೆಗಳ ಬಗ್ಗೆ ಆಸಕ್ತಿ ಹುಟ್ಟಿಸುವ ಜವಾಬ್ದಾರಿ ಶಿಕ್ಷಕರ ಜೊತೆಗೆ ಪಾಲಕರದ್ದೂ ಇದೆ. ವಿದ್ಯಾರ್ಥಿಗಳು ದೂರದರ್ಶನ ಹಾಗೂ ಮೊಬೈಲ್ ದಾಸರಾಗದೇ ಒಳ್ಳೆಯ ಆಸಕ್ತಿ ಹಾಗೂ ಅಭಿರುಚಿಗಳನ್ನು ಬೆಳೆಸಿಕೊಳ್ಳಬೇಕು. ಕ.ವಿ.ವ. ಸಂಘವು ಮಕ್ಕಳ ಶ್ರೇಯೋಭಿಲಾಷೆಗೆ ಪೂರಕವಾಗಿ ನಿರಂತರವಾಗಿ ಕಾರ್ಯಕ್ರಮ ಆಯೋಜಿಸುತ್ತಿದ್ದು ಅದರ ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.
ಬಾಲಬಳಗ ಶಾಲೆಯ ಪ್ರಧಾನ ಗುರುಮಾತೆ ಪ್ರತಿಭಾ ಕುಲಕರ್ಣಿ ಅತಿಥಿಯಾಗಿ ಮಾತನಾಡಿ, ಕ.ವಿ.ವ. ಸಂಘ ಈ ನಾಡಿನ ಹೆಮ್ಮೆಯ ಕನ್ನಡದ ಸಂಘವಾಗಿದ್ದು, ನಿರಂತರವಾಗಿ ಕಳೆದ 133 ವರ್ಷಗಳಿಂದ ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಜಾಗೃತಿ, ಅಭಿಮಾನ ಮೂಡಿಸುತ್ತಿದೆ. ಬಾಲಬಳಗ ಶಾಲೆ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಪಠ್ಯದ ಜೊತೆಗೆ ಪಠ್ಯಪೂರಕ ಚಟುವಟಿಕೆ ಆಯೋಜಿಸುತ್ತಾ ಬೆಳ್ಳಿಹಬ್ಬದ ಹೊಸ್ತಿಲಲ್ಲಿದೆ ಎಂದರು. ಕ.ವಿ.ವ. ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಕರು ಮಕ್ಕಳನ್ನು ತಮ್ಮ ಕುಟುಂಬದ ಸ್ವಂತ ಆಸ್ತಿ ಎಂದು ಬೆಳೆಸದೇ, ದೇಶದ ನಿಜವಾದ ಆಸ್ತಿ ಎಂದು ತಿಳಿದು ಬೆಳೆಸಬೇಕು. ಮಕ್ಕಳೇ ದೇಶದ ನಿಜ ಸಂಪತ್ತು ಎಂದು ಹೇಳಿದರು.
ಗುರು ಹಿರೇಮಠ ಸ್ವಾಗತಿಸಿದರು. ಡಾ. ಸಂಜೀವ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಸಹ ಕಾರ್ಯದರ್ಶಿ ಶಂಕರ ಕುಂಬಿ ಅತಿಥಿಗಳನ್ನು ಗೌರವಿಸಿ, ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಬಾಲ ಬಳಗದ ಶಾಲೆಯ ಮಕ್ಕಳು ಹಾಡುಗಳನ್ನು ಹಾಗೂ ನಿಧಿ ಕೆ.ಎಂ. ಮತ್ತು ಶ್ರೇಯಶ್ರೀ ಬಳ್ಳಾರಿ ಅವರು ಸುಗಮ ಸಂಗೀತವನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ನಿಂಗಣ್ಣ ಕುಂಟಿ, ಎಂ.ಎಂ. ಚಿಕ್ಕಮಠ, ಎಚ್.ಡಿ. ನದಾಫ್ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.