ಸುಗಮ ಲಸಿಕೆಗೆ ಇ-ವೋಚರ್

ಬೆಂಗಳೂರು,ಜೂ.೮- ಜೂ. ೨೧ ರಿಂದ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ ಬೆನ್ನಲ್ಲೆ ಉಳ್ಳವರಿಂದ ಬಡವರ ಲಸಿಕೆಗೆ ಹಣ ಪಾವತಿಸುವ ’ಈಚ್ ಒನ್ ಪೇ ಒನ್’
(ಒಬ್ಬರು ಇನ್ನೊಬ್ಬರಿಗೆ ಪಾವತಿಸಿ) ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಲು ಮುಂದಾಗಿದೆ.
ದೇಶದಲ್ಲಿ ಹಲವರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವ ಬಡವರಿಗೆ ತಗಲುವ ವೆಚ್ಚವನ್ನು ಭರಿಸಲು ಮುಂದೆ ಬಂದಿರುವ ಹಿನ್ನೆಲೆಯಲ್ಲಿ ಉಳ್ಳವರಿಂದ ಬಡವರ ಲಸಿಕೆಯ ಸೇವಾ ಶುಲ್ಕದ ಹಣವನ್ನು ಪಾವತಿಸಲು
ಅನುಕೂಲವಾಗುವಂತೆ ಈ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಹೇಳಿವೆ. ಈ ಸಂಬಂಧ ಕೇಂದ್ರದ ಆರೋಗ್ಯ ಇಲಾಖೆ ಕೇಂದ್ರದ ಹಣಕಾಸು ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಈ ಯೋಜನೆಯಡಿ ಕೇಂದ್ರ ಸರ್ಕಾರ ಇ-ವೋಚರ್‌ಗಳನ್ನು ವಿತರಿಸುತ್ತದೆ. ಪ್ರತಿಯೊಬ್ಬರು ತಮಗೆ ಗೊತ್ತಿರುವವರ ಹೆಸರಿನಲ್ಲಿ ವೋಚರ್‌ಗಳನ್ನು ಖರೀದಿಸಬಹುದು. ಇ-ವೋಚರ್‌ಗಳನ್ನು ತಮಗೆ ಗೊತ್ತಿರುವ ಬಡ ವ್ಯಕ್ತಿಗಳ ಹೆಸರಿನಲ್ಲಿ ತಮ್ಮ ಕೈ ಕೆಳಗೆ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸಹಾಯಕರ ಹೆಸರಿನಲ್ಲಿ ವೋಚರ್‌ಗಳನ್ನು ಖರೀದಿಸಿ ಅವುಗಳನ್ನು ಸಂಬಂಧಿತ ವ್ಯಕ್ತಿಗಳಿಗೆ ನೀಡಬಹುದು. ಇ-ವೋಚರ್ ಪಡೆದ ವ್ಯಕ್ತಿಗಳು ಹತ್ತಿರದ ಖಾಸಗಿ ಆಸ್ಪತ್ರೆಗೆ ಹೋಗಿ ಇ-ವೋಚರ್ ನೀಡಿ ಸೇವಾ ಶುಲ್ಕವಿಲ್ಲದೆ ಉಚಿತವಾಗಿ ಲಸಿಕೆ ಪಡೆಯಬಹುದಾಗಿದೆ.
ಈ ಯೋಜನೆ ಜಾರಿಯಿಂದ ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡಗಳು ಕಡಿಮೆಯಾಗಿ ಲಸಿಕಾ ಅಭಿಯಾನವನ್ನು ವೇಗವಾಗಿ ನಡೆಸಲು ಅನುಕೂಲವಾಗುತ್ತದೆ ಎಂಬುದು ಕೇಂದ್ರಸರ್ಕಾರದ ಲೆಕ್ಕಾಚಾರ.
ಬಡವರು ಖಾಸಗಿ ಆಸ್ಪತ್ರೆಗಳಲ್ಲಿ ಸೇವಾಶುಲ್ಕ ಭರಿಸಲು ಸಾಧ್ಯವಾಗದ ಕಾರಣ ಸರ್ಕಾರಿ ಆಸ್ಪತ್ರೆಗಳಲ್ಲೇ ಲಸಿಕೆ ಪಡೆಯುತ್ತಾರೆ. ಇದರಿಂದ ಸರ್ಕಾರ ಆಸ್ಪತ್ರೆಗಳಲ್ಲಿ ಹೆಚ್ಚಿನ ಒತ್ತಡ ಆಗುವುದಲ್ಲದೇ ಗಂಟೆ ಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಇದರಿಂದ ಲಸಿಕಾ ಅಭಿಯಾನದ ವೇಗವು ಕಡಿಮೆಯಾಗುತ್ತದೆ. ಇದೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಖಾಸಗಿ ಆಸ್ಪತ್ರೆಯಲ್ಲೂ ಬಡವರು ಲಸಿಕೆ ಪಡೆಯಲು ನೆರವಾಗುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ಹಣದ ಕೊರತೆಯನ್ನು ನೀಗಿಸಲು ಈ ಯೋಜನೆ ಜಾರಿ ಮಾಡುತ್ತಿಲ್ಲ. ಕೆಲವರು ಲಸಿಕೆಗೆ ಹಣ ನೀಡಲು ಬಯಸಿರುವುದರಿಂದ ಆ ಹಣವನ್ನು ಬಡವರ ಲಸಿಕೆಗೆ ಬಳಸಲು ಈ ಯೋಜನೆಯನ್ನು ರೂಪಿಸಲಾಗುತ್ತಿದೆ. ಈ ಯೋಜನೆಯಡಿ ಖರೀದಿಸಲಾಗುತ್ತಿರುವ ವೋಚರ್‌ಗಳನ್ನು ಬೇರೆಯವರಿಗೆ ವರ್ಗಮಾಡಲು ಸಾಧ್ಯವಿಲ್ಲ. ಯಾವ ವ್ಯಕ್ತಿಯ ಹೆಸರಿನಲ್ಲಿ ವೋಚರ್ ಖರೀದಿಸಲಾಗಿದೆಯೋ ಆ ವ್ಯಕ್ತಿಯಷ್ಟೇ ಲಸಿಕೆ ಪಡೆಯಬೇಕು.
ಇ-ವೋಚರ್‌ಗಳಿಗೆ ರಿಸರ್ವ್‌ಬ್ಯಾಂಕ್ ಮಾನ್ಯತೆ ಇದ್ದು, ಯಾರು ಎಷ್ಟು ಬೇಕೋ ಅಷ್ಟು ವೋಚರ್ ಖರೀದಿಸಲು ಅವಕಾಶವಿದೆ.
ಜೂ. ೨೧ ರಿಂದ ಎಲ್ಲರಿಗೂ ಉಚಿತ ಲಸಿಕೆ ನೀಡುವ ಘೋಷಣೆಯನ್ನು ಪ್ರಧಾನಿ ಮಾಡಿದ್ದು, ದಿನಕ್ಕೆ ೧ ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುವವರು ಸೇವಾ ಶುಲ್ಕವಾಗಿ ೧೫೦ ರೂ.ಗಳನ್ನು ನಿಗದಿ ಮಾಡಲಾಗಿದೆ. ಈಗ ಈ ೧೫೦ ರೂ.ಗಳನ್ನು ಉಳ್ಳವರಿಂದ ಪಡೆಯುವ ಮೂಲಕ ಸರ್ಕಾರಿ ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲೂ ಬಡವರಿಗೆ ಲಸಿಕೆ ನೀಡಲು ’ಈಚ್ ಒನ್ ಪೇ ಒನ್’ (ಒಬ್ಬರು ಇನ್ನೊಬ್ಬರಿಗೆ ಪಾವತಿಸಿ) ಯೋಜನೆ ಜಾರಿಯಾಗುತ್ತಿದೆ.