ಸುಗಮ ಕಲಾಪಕ್ಕೆ ಮೋದಿ ಮನವಿ

ನವದೆಹಲಿ, ಜು. ೧೮- ಇಂದಿನಿಂದ ಆರಂಭವಾಗಿರುವ ಸಂಸತ್ ಅಧಿವೇಶನದ ಕಲಾಪವನ್ನು ಫಲಪ್ರದಗೊಳಿಸಿ ಮುಕ್ತ ಮನಸ್ಸಿನಿಂದ ವಿಷಯಗಳ ಮೇಲೆ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳಿಗೆ ಮನವಿ ಮಾಡಿದ್ದಾರೆ.
ಅಧಿವೇಶನ ಆರಂಭಕ್ಕೆ ಮುನ್ನ ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಸತ್ತಿನ ಅಧಿವೇಶನ ಮಹತ್ವದಾಗಿದ್ದು ಅಜಾದಿಕ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕಲಾಪಗಳು ನಡೆಯುತ್ತಿವೆ. ಈ ಅಮೂಲ್ಯ ಸಮಯವನ್ನು ಸದ್ಭಳಕೆ ಮಾಡಿಕೊಂಡು ಸದಸ್ಯರು ಕಲಾಪದಲ್ಲಿ ಭಾಗಿಯಾಗಬೇಕು ಎಂದರು.
ಆಗಸ್ಟ್ ೧೫ ಮತ್ತು ಮುಂಬರುವ ೨೫ ವರ್ಷಗಳಿಗೆ ವಿಶೇಷ ಮಹತ್ವವಿದ್ದು, ದೇಶವು ನೂರು ವರ್ಷಗಳ ಸ್ವಾತಂತ್ರವನ್ನು ಆಚರಿಸಬೇಕು. ಇದಕ್ಕಾಗಿ ಸಂಕಲ್ಪ ಮಾಡುವ ಸಮಯ ಇದಾಗಿದೆ. ಈ ಮೂಲಕ ದೇಶವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ ಎಂದು ಹೇಳಿದರು.
ಸಂಸತ್ತಿನಲ್ಲಿ ಮುಕ್ತ ಮನಸ್ಸಿನಿಂದ ಚರ್ಚೆ ನಡೆಯಬೇಕು. ಅಧಿವೇಶನವನ್ನು ಸಾಧ್ಯವಾದಷ್ಟು ಫಲಪ್ರದಗೊಳಿಸಬೇಕು, ಎಲ್ಲ ಸಂಸದರು ಆಳವಾಗಿ ಆಲೋಚಿಸಿ, ಚರ್ಚಿಸಬೇಕೆಂದು ಹೇಳಿದರು.
ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳ ಬಗ್ಗೆಯೂ ಮಾತನಾಡಿ ಮೋದಿ ಈ ಎರಡು ಹುದ್ದೆಗಳಿಗೆ ಮತದಾನ ನಡೆಯುತ್ತಿರುವುದರಿಂದ ಈ ಅಧಿವೇಶನ ಮಹತ್ವದ್ದಾಗಿದೆ ಎಂದರು.
ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂ ಆಗಸ್ಟ್ ೧೨ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಒಟ್ಟು ೩೨ ಮಸೂದೆಗಳು ಅಂಗೀಕಾರವಾಗುವ ನಿರೀಕ್ಷೆಯಿದೆ.