ಸುಗಮವಾಗಿ ನಡೆದ ಪಬ್ಲಿಕ್ ಪರೀಕ್ಷೆಗಳು

ವಿಜಯಪುರ.ಮಾ೧೩: ರಾಜ್ಯದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಐದು, ಎಂಟು, ಒಂಬತ್ತನೇ ತರಗತಿಗಳಿಗೆ ಮೊದಲ ಬಾರಿ ಪಬ್ಲಿಕ್ ಎಕ್ಸಾಮ್ ಸೋಮವಾರದಿಂದ ಪ್ರಾರಂಭಗೊಂಡಿದ್ದು ವಿಜಯಪುರ ಹೋಬಳಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ಸರ್ಕಾರಿ ಉರ್ದು ಶಾಲೆಗಳು ಸೇರಿ ೩೧ ಶಾಲೆಗಳ ಪೈಕಿ, ಹೋಬಳಿಯಲ್ಲಿ ಐದನೇ ತರಗತಿಯ ೬೫೪ ವಿದ್ಯಾರ್ಥಿಗಳು, ೮ನೇ ತರಗತಿಯ ೭೩೨ ವಿದ್ಯಾರ್ಥಿಗಳು, ೯ನೇ ತರಗತಿಯ ೮೧೧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಒಟ್ಟಾರೆ ಎಲ್ಲಾ ಶಾಲೆಗಳಲ್ಲಿ ೨೧೯೭ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸಿದರು.
ಐದನೇ ತರಗತಿ ವಿದ್ಯಾರ್ಥಿಗಳಿಗೆ ೪೦ ಅಂಕಗಳಿಗೆ ಮಧ್ಯಾಹ್ನ ೨:೩೦ ರಿಂದ ೪:೩೦ರ ವರೆಗೆ ಪರೀಕ್ಷೆ ನಡೆದಿದ್ದು, ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಭಾಷೆಗೆ ೫೦ ಅಂಕ ಉಳಿದ ವಿಷಯಗಳಿಗೆ ೪೦ ಅಂಕಗಳಿಗೆ ಮಧ್ಯಾಹ್ನ ೨:೩೦ ರಿಂದ ೫ ಗಂಟೆಯವರೆಗೆ ಪರೀಕ್ಷೆಗಳು ನಡೆದಿದ್ದು, ೯ನೇ ತರಗತಿ ವಿದ್ಯಾರ್ಥಿಗಳಿಗೆ ಭಾಷೆಗೆ ೧೦೦ ಅಂಕ ಉಳಿದ ವಿಷಯಗಳಿಗೆ ೮೦ ಅಂಕಗಳಿಗೆ ಮಧ್ಯಾಹ್ನ ೨ ಗಂಟೆಯಿಂದ ೫. ೧೫ ರವರೆಗೆ ಪರೀಕ್ಷೆಗಳು ನಡೆಯಿತು.
ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದು, ಕೊಠಡಿ ಮೇಲ್ವಿಚಾರಕರಾಗಿ ಬೇರೆ ಬೇರೆ ಶಾಲೆಗಳ ಶಿಕ್ಷಕರುಗಳನ್ನು ಬೇರೆ ಬೇರೆ ಶಾಲೆಗಳಿಗೆ ನಿಯೋಜಿಸಲಾಗಿದ್ದು ವಿಶೇಷವಾಗಿತ್ತು. ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ದೇವನಹಳ್ಳಿಯ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಮಧ್ಯಾಹ್ನ ೧೨ ಗಂಟೆ ನಂತರ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಕೆಲಸ ನಡೆಯಿತು ಎಂದು ಸಿಆರ್‌ಪಿ ದಿನೇಶ್ ರವರು ತಿಳಿಸಿದರು.