ದಾವಣಗೆರೆ.ಮಾ.೩೧: ದಾವಣಗೆರೆ ಜಿಲ್ಲೆಯ ಒಟ್ಟು 89 ಕೇಂದ್ರಗಳಲ್ಲಿ ಎಸ್ ಎಸ್ಎಲ್ ಸಿ ಪರೀಕ್ಷೆಗಳು ಸುಗಮವಾಗಿ ಜರುಗಿದೆ.ಇಂದು ಪ್ರಥಮಭಾಷೆ ಕನ್ನಡ ವಿಷಯದ ಪರೀಕ್ಷೆ ನಡೆಯಿತು. ನಗರದ ಮೋತಿವೀರಪ್ಪ ಕಾಲೇಜು ಹಾಗೂ ಸೀತಮ್ಮ ಕಾಲೇಜಿನ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಿಲ್ಲೆಯಲ್ಲಿ 464 ಪ್ರೌಢಶಾಲೆಗಳ 10736 ಬಾಲಕರು, 10901 ಬಾಲಕಿಯರು ಪರೀಕ್ಷೆಗೆ ನೋಂದಣಿ ಮಾಡಿಸಿದ್ದಾರೆ.ಚನ್ನಗಿರಿಯಲ್ಲಿ 3842, ದಾವಣಗೆರೆ ಉತ್ತರ ವಲಯದಲ್ಲಿ 3638, ದಾವಣಗೆರೆ ದಕ್ಷಿಣದಲ್ಲಿ 5656, ಹರಿಹರದಲ್ಲಿ 3189, ಹೊನ್ನಾಳಿಯಲ್ಲಿ 2904, ಜಗಳೂರಿನಲ್ಲಿ 2408 ವಿದ್ಯಾರ್ಥಿಗಳಿದ್ದಾರೆ. ಇಂದಿನಿಂದ ಏಪ್ರಿಲ್ ೧೫ರವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳ ಸುತ್ತಲೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಆದೇಶ ಹೊರಡಿಸಿದ್ದಾರೆ.ಜಿಲ್ಲಾ ವ್ಯಾಪ್ತಿಯ ೮೯ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ಹಿನ್ನಲೆಯಲ್ಲಿ ಪರೀಕ್ಷಾ ದಿನಗಳಂದು ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀಟರ್ ಪರಿಧಿ ವ್ಯಾಪ್ತಿ ಪ್ರದೇಶವನ್ನು ಸಾರ್ವಜನಿಕ ಪ್ರವೇಶಕ್ಕೆ ನಿಷೇಧಿತ ಪ್ರದೇಶವೆಂದು ಮತ್ತು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿರುವ ಜೇರಾಕ್ಸ್ ಅಂಗಡಿಗಳು, ಸೈಬರ್‌ಕೆಫೆ ಮತ್ತು ಕಂಪ್ಯೂಟರ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚಲು ಆದೇಶ ಹೊರಡಿಸಿದ್ದಾರೆ.ಆದೇಶವು ಪರೀಕ್ಷಾರ್ಥಿಗಳಿಗೆ ಹಾಗೂ ಪರೀಕ್ಷಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಬಿಡಲು ಬರುವ ಪೋಷಕರು ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರದ ಬಳಿ ಗುಂಪುಗೂಡುವುದು, ನಿಲ್ಲುವುದು ಮತ್ತು ವಾಹನಗಳನ್ನು ಪಾರ್ಕಿಂಗ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.ಒಟ್ಟಾರೆ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ಜರುಗಿತು.