ಸುಗಟೂರಿನ ರಾಮಯ್ಯ ಕೆರೆ ಕೋಡಿ ನಿರ್ಮಾಣ

ಕೋಲಾರ,ನ೫:ಯಾವುದೇ ಶಾಶ್ವತ ನದಿ ಮೂಲಗಳಿಲ್ಲದ ಕೋಲಾರ ಜಿಲ್ಲೆಗೆ ಕೆರೆಗಳೇ ಜೀವಾಳವಾಗಿವೆ, ಇಂತಹ ಪ್ರಕೃತಿದತ್ತವಾದ ಕೆರೆಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಕೋಲಾರ ಜಿಲ್ಲೆಯ ಕೆರೆಗಳ ಪುನಶ್ಚೇತನಕ್ಕೆ ನೆರವಾಗುತ್ತಿದ್ದಾರೆ ಯೋಜನೆ ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ್ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಧರ್ಮಾಧಿಕಾರಿ ವೀರೇಂದ್ರಹೆಗ್ಗಡೆಯವರ ಮಾರ್ಗದರ್ಶನದ “ನಮ್ಮ ಊರು- ನಮ್ಮ ಕೆರೆ” ಯೋಜನೆಯಡಿ ಪುನಶ್ಚೇತನಗೊಂಡಿರುವ ತಾಲ್ಲೂಕಿನ ಸುಗಟೂರಿನ ರಾಮಯ್ಯ ಕೆರೆ ಇದೀಗ ನೀರು ತುಂಬಿ ಕೋಡಿ ಹೋಗುತ್ತಿರುವುದನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿ ಅವರು ಮಾತನಾಡಿ ಈ ಯೋಜನೆಯಿಂದ ಜಿಲ್ಲೆಯ ಅನೇಕ ಕೆರೆಗಳನ್ನು ಹೂಳೆತ್ತಿ ಪುನಶ್ಚೇತನಗೊಳಿಸಿದ್ದು, ಕಳೆದ ಸಾಲಿಗೆ ಸುಗಟೂರಿನ ರಾಮಯ್ಯ ಕೆರೆಯೂ ಸೇರ್ಪಡೆಯಾಯಿತು ಎಂದರು.
ಕೆರೆ ಹೂಳೆತ್ತುವ ಹಾಗೂ ಕೆರೆ ಪುನಶ್ಚೇತನವನ್ನು ಸುಮಾರು ೧೦ಲಕ್ಷ ವೆಚ್ಚದಲ್ಲಿ ೨೩ ಎಕರೆ ವಿಸ್ತೀರ್ಣವಿರುವ ರಾಮಯ್ಯನ ಕೆರೆ ಅಭಿವೃದ್ಧಿ ಕಾರ್ಯಕ್ರಮವನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದರು
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಹಭಾಗಿತ್ವದಲ್ಲಿ ಗ್ರಾಮದಲ್ಲಿ ಕೆರೆ ಅಭಿವೃದ್ಧಿ ಸಮಿತಿ ರಚನೆ ಮಾಡಿ ಹಾಗೂ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಹಾಗೂ ಊರಿನ ಮುಖಂಡರು ಗ್ರಾಮಸ್ಥರ ಸಹಕಾರದಿಂದ ಕೆರೆಯಲ್ಲಿ ಹೂಳೆತ್ತುವ ಕಾರ್ಯ ನಡೆಸಲಾಗಿತ್ತು ತಿಳಿಸಿದರು.
ಸದರಿ ಕೆರೆಯು ಪ್ರಸ್ತುತ ವರ್ಷದಲ್ಲಾದ ಮಳೆಯಿಂದಾಗಿ ಹಾಗೂ ಕೆ.ಸಿ ವ್ಯಾಲಿ ನೀರು ಅಗ್ರಹಾರ ಕೆರೆಯಿಂದ ಬಂದು ಕೆರೆಗೆ ಸೇರಿರುವುದರಿಂದ ಈಗ ಕೆರೆಯು ತುಂಬಿ ಕೋಡಿ ಹರಿಯುತ್ತಿದೆ ಎಂದು ಹರ್ಷ ವ್ಯಕ್ತ ಪಡೆಸಿದರು.
ಜಿಲ್ಲೆಯ ವಿವಿಧ ಕೆರೆ ಉಸ್ತುವಾರಿ ಸಮಿತಿ ಸಮಿತಿಗಳ ರಚಿಸಿದ್ದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಅನೇಕ ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ, ಕಳೆದ ಮೂರುವರ್ಷಗಳ ಹಿಂದೆ ಅರಾಭಿಕೊತ್ತನೂರು ಕೆರೆಯ ಹೂಳು ತೆಗೆದ ನಂತರ ಆ ಕೆರೆಯೂ ಭರ್ತಿಯಾಗಿದೆ ಎಂದರು.
ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ನಾರಾಯಣಗೌಡ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಅನೇಕ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ, ಅನೇಕ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಅನಾಥ,ಅಸಹಾಯಕರಿಗೆ ಮಾಸಿಕ ವೇತನದಂತಹ ಅನೇಕ ಜನಪರ ಕೆಲಸ ಮಾಡುತ್ತಿದೆ ಎಂದರು.
ಧರ್ಮಸ್ಥಳ ಯೋಜನೆಯ ವಲಯದ ಮೇಲ್ವಿಚಾರಕ ಎಸ್.ರಾಜೇಶ್, ಚಿಟ್ನಹಳ್ಳಿಯ ಸಿ.ಬಿ.ಆನಂದ್ ಮತ್ತಿತರರು ಇದ್ದರು.