ಸುಗಟೂರಿನಲ್ಲಿ ವೈಭವದ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ

ಕೋಲಾರ,ಮಾ,೧೩- ತಾಲ್ಲೂಕಿನ ಸುಗಟೂರು ಗ್ರಾಮದ ಇತಿಹಾಸ ಪ್ರಸಿದ್ದ ಕೋದಂಡ ರಾಮಸ್ವಾಮಿಯ ಬ್ರಹ್ಮ ರಥೋತ್ಸವ ಈ ಬಾರಿ ಅತ್ಯಂತ ವೈಭವದಿಂದ ನಡೆದಿದ್ದು, ಸುಮಾರು ೫೫ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ೩೬ ಅಡಿ ಎತ್ತರದ ಸುಂದರ ಹೊಸ ರಥಕ್ಕೆ ಚಾಲನೆ ನೀಡಿದ್ದು, ಸಹಸ್ರಾರು ಮಂದಿ ಶ್ರದ್ಧಾಭಕ್ತಿಯಿಂದ ಭಾಗವಹಿಸಿದ್ದರು.
ಇತಿಹಾಸ ಪ್ರಸಿದ್ದ ಸುಗಟೂರು ರಥೋತ್ಸವಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಮೊದಲಿದ್ದ ರಥ ಶಿಥಿಲವಾಗಿದ್ದ ಕಾರಣ ಗ್ರಾಮದ ಹಲವರು ಸಮಾಜಮುಖಿ ನಾಯಕರ ತಂಡ ಗುಂಪು ಕಟ್ಟಿಕೊಂಡು ನೂತನ ರಥ ತಯಾರಿಸಲು ಶ್ರಮಿಸಿದ್ದಾರೆ.
ಗ್ರಾ.ಪಂ ಸದಸ್ಯ ಕೆ.ರವಿ, ಮುಖಂಡರಾದ ಕೃಷ್ಣೇಗೌಡ, ಎಸ್.ವಿ.ನಾರಾಯಣಗೌಡ, ದಾಸಪ್ಪ, ಗೋ.ನಾ.ಸ್ವಾಮಿ, ಶಿಲ್ಪಿ ಸುಧಾಮಾಚಾರಿ, ಎಸ್.ಪಿ.ರಮೇಶ್ ಮತ್ತಿತರ ಗ್ರಾಮಸ್ಥರನ್ನೊಳಗೊಂಡ ತಂಡ ಸಂಘಟಿತ ಪ್ರಯತ್ನ ನಡೆಸಿ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳ ದಾನಿಗಳಿಂದ ಹಣ ಸಂಗ್ರಹಿಸಿ ಈ ಸುಂದರ ರಥವನ್ನು ತಯಾರಿಸಿ ಲೋಕಾರ್ಪಣೆ ಮಾಡಿದೆ.
ರಥ ತಯಾರಿಯ ಕುರಿತು ಗ್ರಾ.ಪಂ ಸದಸ್ಯ ಕೆ.ರವಿ ಮಾಹಿತಿ ನೀಡಿ, ನೂತನ ರಥಕ್ಕೆ ಪೂರ್ಣವಾಗಿ ಟೀಕ್ ಮತ್ತು ಹೊನ್ನೆ ಮರವನ್ನೇ ಬಳಸಲಾಗಿದ್ದು, ೩೬ ಅಡಿ ಎತ್ತರವಿರುವಂತೆ ವಾಸ್ತು ನಿಯಮಗಳಡಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಹೊಸ ರಥದೊಂದಿಗೆ ಇದೇ ಮೊದಲ ಬಾರಿಗೆ ಕೋದಂಡ ರಾಮಸ್ವಾಮಿಯ ವಿಗ್ರಹಗಳು ಮೆರವಣಿಗೆ ನಡೆಸಿದ್ದು, ಸಾವಿರಾರು ಮಂದಿ ಸಾಕ್ಷಿಯಾದರು.
ರಥೋತ್ಸವದ ಅಂಗವಾಗಿ ಶಿಲ್ಪಿ ಸುಧಾಮಾಚಾರಿ ನೇತೃತ್ವದಲ್ಲಿ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ರಥೋತ್ಸವದಲ್ಲಿ ಗ್ರಾ.ಪಂ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ದ್ಯಾವಪ್ಪ, ಸದಸ್ಯ ರವಿ, ಮುಖಂಡರಾದ ಎಸ್.ವಿ.ನಾರಾಯಣಗೌಡ, ಕೃಷ್ಣೇಗೌಡ ಮತ್ತಿತರರು ನೇತೃತ್ವ ವಹಿಸಿದ್ದು, ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮತ್ತಿತರರು ಹಾಜರಿದ್ದರು.
ಸೋಮವಾರದಂದು ರಾವಣೋತ್ಸವ
ರಾಕ್ಷಸನಿಗೂ ಪೂಜೆ ಸಲ್ಲಿಸುವ ವಿಶಿಷ್ಟ ಸಂಪ್ರದಾಯ ಸುಗಟೂರು ಗ್ರಾಮದಲ್ಲಿದ್ದು, ಮಾ.೧೩ರ ಸೋಮವಾರ ರಾತ್ರಿ ವೈಭವದ ರಾವಣೋತ್ಸವ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಸುಗಟೂರು ಗ್ರಾಮದ ಈಶ್ವರನ ದೇವಾಲಯದಲ್ಲಿ ಇಟ್ಟಿರುವ ರಾವಣಾಸುರ ಶಿವನ ಮೂರ್ತಿಗಳನ್ನು ಹೊತ್ತಂತೆ ಭವ್ಯ ಪಲ್ಲಕ್ಕಿ ನಿರ್ಮಿಸಿ ಪೂಜೆ ಸಲ್ಲಿಸುವ ವಾಡಿಕೆ ಇಲ್ಲಿದ್ದು, ಇಡೀ ಗ್ರಾಮವೇ ಅಂದು ವಿದ್ಯುತ್ ದೀಪಗಳಿಂದ ಜಗಮಗಿಸಲಿದೆ.