ಸುಖಿ, ಸ್ವಾವಲಂಬಿ ರಾಜ್ಯ ಸಿಎಂ ಸಂಕಲ್ಪ

ಬೆಂಗಳೂರು, ಮೇ ೨೦- ಹಲವು ಸವಾಲುಗಳ ನಡುವೆಯೂ ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ವರ್ಷದ ಆಡಳಿತದಲ್ಲಿ ೫ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ಮಾತು ಉಳಿಸಿಕೊಂಡಿದೆ. ನಮ್ಮ ಸಂಕಲ್ಪ ಕೇವಲ ಗ್ಯಾರಂಟಿ ಯೋಜನೆಗಳಲ್ಲ. ಅಭಿವೃದ್ಧಿಯ ರಥವನ್ನು ಗ್ಯಾರಂಟಿಗಳ ಆಚೆಗೆ ಕೊಂಡೊಯ್ದು ರಾಜ್ಯವನ್ನು ಸುಖಿ ಮತ್ತು ಸ್ವಾವಲಂಬಿಯನ್ನಾಗಿ ಮಾಡುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ನಮ್ಮ ಸರ್ಕಾರ ಒಂದು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ರಾಜ್ಯದ ೭ ಕೋಟಿ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು. ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಅಭದ್ರತೆಯ ಆತಂಕ ಇರಲೇಬಾರದು ಎಂದು ಸ್ಪಷ್ಟವಾದ ಬಹುಮತವನ್ನು ಕೊಟ್ಟು ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದು ರಾಜ್ಯದ ಮತದಾರರ ಪ್ರಜ್ಞಾವಂತಿಕೆ ಎಂದು ಹೇಳಿದ್ದಾರೆ.
ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುವಾದಗಳಿಂದ ನಲುಗಿ ಹೋಗಿದ್ದ ರಾಜ್ಯದ ಆಡಳಿತವನ್ನು ಮತ್ತೆ ಸರಿದಾರಿಗೆ ತರುವ ದೊಡ್ಡ ಜವಾಬ್ದಾರಿಗೆ ಹೆಗಲು ಕೊಟ್ಟಾಗ ಅದರ ಭಾರದ ಅರಿವು ನಮಗಿತ್ತು. ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಲು ನಾವು ಹೋರಾಟವನ್ನೇ ಮಾಡಬೇಕಾಯಿತು ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ನಮ್ಮ ಕೈಗಳ ಬಲ ಕುಂದಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಕೇಂದ್ರ ಸರ್ಕಾರದ ಜತೆಗೂಡಿ ರಾಜ್ಯ ಬಿಜೆಪಿ ನಡೆಸಿದೆ. ಇಂತಹ ಸವಾಲುಗಳ ನಡುವೆಯೂ ನಮ್ಮ ೫ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ನಮ್ಮ ಮಾತು ಉಳಿಸಿಕೊಂಡಿದ್ದೇವೆ ಎಂದಿದ್ದಾರೆ.
ನಮ್ಮ ಸಂಕಲ್ಪ ಕೇವಲ ಗ್ಯಾರಂಟಿ ಯೋಜನೆಗಳಲ್ಲ, ಅಭಿವೃದ್ಧಿಯ ರಥವನ್ನು ಗ್ಯಾರಂಟಿಗಳ ಆಚೆಗೆ ಕೊಂಡೊಯ್ದು ರಾಜ್ಯವನ್ನು ಸುಖಿ ಮತ್ತು ಸ್ವಾವಲಂಬಿಯನ್ನಾಗಿ ಮಾಡುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಾಧನೆಯ ಬಲದಲ್ಲಿ ನಮ್ಮನ್ನು ಎದುರಿಸಲಾಗದ ವಿರೋಧ ಪಕ್ಷಗಳು ಜಾತಿ, ಧರ್ಮಗಳನ್ನು ರಾಜಕೀಯದ ಅಸ್ತ್ರಗಳನ್ನಾಗಿ ಬಳಸಿಕೊಂಡು ನಮ್ಮ ಮೇಲೆ ಎರಗುತ್ತಿದ್ದಾರೆ. ರಾಜ್ಯದ ಪ್ರಜ್ಞಾವಂತ ಜನತೆ ಈ ವಿಭಜನಕಾರಿ ಮತ್ತು ವಿನಾಶಕಾರಿ ಅಜೆಂಡಾಗೆ ಬಲಿಯಾಗದೆ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಿಕೊಳ್ಳಲು ಸಹಕರಿಸಬೇಕೆಂದಷ್ಟೇ ನನ್ನ ಕೋರಿಕೆ ಎಂದು ಸಿದ್ದರಾಮಯ್ಯ ಅವರು ಟ್ವೀಟ್‌ನಲ್ಲಿ ಮನವಿ ಮಾಡಿದ್ದಾರೆ.
ಉಳಿದಂತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕಾಯಕವನ್ನು ನಮಗೆ ಬಿಟ್ಟು ಬಿಡಿ. ನುಡಿದಂತೆ ನಡೆದಿದ್ದೆವು, ನುಡಿದಂತೆ ನಡೆಯುತ್ತಿರುವೆವು, ಮುಂದೆಯೂ ನುಡಿದಂತೆ ನಡೆಯುವೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ನಲ್ಲಿ ರಾಜ್ಯದ ಜನತೆಗೆ ಭರವಸೆ ನೀಡಿದ್ದಾರೆ.