ಸುಕ್ಷೇತ್ರಗಳು ಬಸವಭಕ್ತರ ಪಾಲಿನ ಪಾವನ ಭೂಮಿಯಾಗಿವೆ :ಪ.ಗು. ಸಿದ್ದಾಪುರ

ವಿಜಯಪುರ :ನ.24:ಬಾಗೇವಾಡಿ, ಕಲ್ಯಾಣ, ಸಂಗಮ ಸುಕ್ಷೇತ್ರಗಳು ಬಸವಭಕ್ತರ ಪಾಲಿನ ಪಾವನ ಭೂಮಿಯಾಗಿವೆ ಎಂದು ಸಾಹಿತಿ ಪ.ಗು. ಸಿದ್ದಾಪುರ ಹೇಳಿದರು.
ಬಬಲೇಶ್ವರ ತಾಲೂಕು ಶರಣ ಸಾಹಿತ್ಯ ಪರಿಷತ್ತು ಸಮೀಪದ ನಾಗರಾಳ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಂಡ ತಂಗೆಮ್ಮ ಹಾಗೂ ಪಾಂಡಪ್ಪಗೌಡ ಬಿರಾದಾರ ದತ್ತಿ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಕಾಯಕ ದಾಸೋಹಗಳ ಮಹತ್ವ ಕುರಿತು ಮಾತನಾಡಿದ ಅವರು, ವಿರಕ್ತರು, ಶಿವಾಚಾರ್ಯರು, ಸರ್ವರೂ ಬಸವತಂದೆ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದರೆ ಇವನಮ್ಮವನೆಂಬ ಭಾವ ಮೂಡುತ್ತದೆ ಎಂದು ಹೇಳಿದರು.
ಸತ್ಯಕ್ಕ, ಸಂಕವ್ವೆ, ಲಕ್ಕಮ್ಮ, ಅಪ್ಪಣ್ಣ, ಚೆÀನ್ನಯ್ಯ, ಮಾರಯ್ಯ, ಗುಂಡಯ್ಯ, ಕೇತಯ್ಯ ಹೀಗೆ ಮುಂತಾದ ಶರಣರು ತಮ್ಮ ಕಾಯಕದಲ್ಲಿ ದೇವರನ್ನು ಕಂಡವರು. ಇಂದು ಮಠ-ಮಾನ್ಯಗಳು ಅನ್ನ, ಅಕ್ಷರ ದಾಸೋಹಗಳಂತಹ ಕೈಂಕರ್ಯದಲ್ಲಿ ತೊಡಗಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಮರೆಗುದ್ದಿ ಅಡವಿ ಸಿದ್ದೇಶ್ವರ ಮಠದ ಡಾ. ನಿರುಪಾದೀಶ್ವರ ಸ್ವಾಮೀಜಿ ಮಾತನಾಡಿ, ತುಕಾರಾಮ, ಪುರಂದರದಾಸರು ಮೇಲೂ ಬಸವಣ್ಣನವರ ಪ್ರಭಾವವಾಗಿತ್ತು. ಶರಣ-ಸಂತರ ಜೀವನ ಚರಿತ್ರೆ ಓದಿ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಮುಂದೆ ಸಾಗುವುದು ಇಂದಿನ ಅವಶ್ಯಕತೆಯಾಗಿದೆ ಎಂದರು.
ಅತಿಥಿ ಚನ್ನಯ್ಯ ಹಿರೇಮಠ, ಸಾಹಿತಿ ಡಾ. ಮುರುಗೇಶ ಸಂಗಮ ಮಾತನಾಡಿದರು. ಪರಿಷತ್ತ ಅಧ್ಯಕ್ಷ ಎಲ್.ಪಿ.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪ್ರಭುಸ್ವಾಮಿ ಹಿರೇಮಠ, ಅಪ್ಪಾಸಾಹೇಬ ಕನ್ನೂರ ವೇದಿಕೆಯಲ್ಲಿದ್ದರು.
ಪರಿಷತ್ತ ಕಾರ್ಯದರ್ಶಿ ಕೆ.ಆರ್. ಅರಕೇರಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಮಲ್ಲಿಕಾರ್ಜುನ ತೊದಲಬಾಗಿ ಸ್ವಾಗತಿಸಿದರು. ಪ್ರಕಾಶ ಜನವಾಡ ನಿರೂಪಿಸಿದರು. ಅಲ್ಲಾಬಕ್ಷ ಬಸರಗಿ ವಂದಿಸಿದರು.