ಸುಕೋ ಬ್ಯಾಂಕ್ ಗೆ 7.87 ಕೋಟಿ ರೂ ನಿವ್ವಳ ಲಾಭ: ಮೋಹಿತ್ ಮಸ್ಕಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.02: ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿ ನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಹಕಾರಿ ಕ್ಷೇತ್ರದ `ಸುಕೋ ಬ್ಯಾಂಕ್’ 2022–23 ರ  ಸಾಲಿನಲ್ಲಿ 1560 ಕೋಟಿ ರೂ.ವಹಿವಾಟು ನಡೆಸಿ ಒಟ್ಟು 18.65 ಕೋಟಿ ರೂ, ನಿವ್ವಳ ಲಾಭ 7.87 ಕೋಟಿ ರ.  ಲಾಭ ಗಳಿಸಿದೆಂದು ಬ್ಯಾಂಕ್‍ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ತಿಳಿಸಿದ್ದಾರೆ.
ಅವರು ಇಂದು ಬ್ಯಾಂಕ್‍ನ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಮಾಹಿತಿ ನೀಡಿದರು.
 ನಮ್ಮ  ಬ್ಯಾಂಕ್ ಪ್ರತಿ ವರ್ಷ ತನ್ನ ಒಟ್ಟಾರೆ ವ್ಯವಹಾರವನ್ನು ವೃದ್ಧಿಗೊಳಿಸಿದೆ. ಕರ್ನಾಟಕದಾದ್ಯಂತ ಕಾರ್ಯ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿದ್ದು 29 ಶಾಖೆಗಳ ಮೂಲಕ‌ ವ್ಯವಹಾರ ನಡೆಸುತ್ತಿದೆ. ಕಳೆದ ವರ್ಷ 940 ಕೋಟಿ ರೂಪಾಯಿ ಠೇವಣಿ ಹೊಂದಿ, 620 ಕೋಟಿ ರೂಪಾಯಿ ಸಾಲ ವಿತರಣೆ ಮಾಡಿದೆಂದು ಹೇಳಿದರು. 
ಒಟ್ಟು ಸಾಲದಲ್ಲಿ 25 ಲಕ್ಷದೊಳಗಿನ ಕಿರು ಸಾಲಗಳು 252 ಕೋಟಿ ರೂ ಇದೆ. ಸುಕೋ ಬ್ಯಾಂಕ್ ಎಮ್.ಎಸ್.ಎಮ್.ಇ ವಲಯಕ್ಕೆ ನೀಡುತ್ತಿರುವ ಮಹತ್ವವನ್ನು ಇದು ಪ್ರತಿಫಲಿಸುತ್ತದೆಂದರು.‌
ಬ್ಯಾಂಕ್‍ನ ಎನ್‍ಪಿಎ ಶೇ. 0% ಇದ್ದು ಇದು ಸುಕೋ ಬ್ಯಾಂಕ್‍ನ ಆರ್ಥಿಕ ಭದ್ರತೆಯನ್ನು ಸೂಚಿಸುತ್ತದೆಂದರು.
ಸುಕೋ ಬ್ಯಾಂಕ್ ಕೇಂದ್ರ ಸರ್ಕಾರದ ಯುಪಿಐ ಹಣ ಪಾವತಿ ತಂತ್ರಜ್ಞಾನದ ವ್ಯವಸ್ಥೆಗೆ ಒಳಪಟ್ಟ ಕರ್ನಾಟಕದ ಪ್ರಪ್ರಥಮ ಸಹಕಾರಿ ಬ್ಯಾಂಕ್ ಆಗಿದೆಂದರು.  
ನಮ್ಮ ಗ್ರಾಹಕರ ಉಳಿತಾಯಕ್ಕೆ ಹಣ ದುಬ್ಬರಕ್ಕಿಂತ ಹೆಚ್ಚಿನ ಬಡ್ದಿ ನೀಡಿ ಅವರ ಉಳಿತಾಯಕ್ಕೆ ಗೌರವ ನೀಡುವ
ನಿಟ್ಟಿನಲ್ಲಿ ಕಳೆದ ವರ್ಷ ತ್ರಿಬಲ್ ಆರ್ (ರೆಪೋ ರಿಲೇಟೆಡ್ ರೇಟ್ )ಎನ್ನುವ  ಹೊಸ ಹಾಗೂ ವಿನೂತನ ಠೇವಣಿ ಯೋಜನೆಯನ್ನು ಜಾರಿ ತಂದಿದ್ದೇವೆ. ಆರ್ ಬು ಐ ನಿರ್ಧರಿಸುವ ರೆಪೋ ರೇಟ್‍ಗಿಂತ ಶೇ. 2.20% ಹೆಚ್ಚು ಬಡ್ಡಿಯನ್ನು ಈ ಯೋಜನೆಯಲ್ಲಿ ನೀಡುತ್ತಿದ್ದೇವೆ. ಇದು 3 ವರ್ಷಗಳ ಠೇವಣಿ ಯೋಜನೆಯಾಗಿದ್ದು ಪ್ರತೀ ಆರು ತಿಂಗಳಿಗೊಮ್ಮೆ ರಿಜರ್ವ್ ಬ್ಯಾಂಕಿನ ರೆಪೋರೇಟ್ ಅನುಸಾರ ಬಡ್ಡಿದರ ಬದಲಾಗುತ್ತದೆ. ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ವಿನೂತನ ಠೇವಣಿ ಯೋಜನೆಯಾಗಿದೆಂದರು‌
ನವೆಂಬರ್ ತಿಂಗಳಿನಲ್ಲಿ ಈ ಯೋಜನೆಗೆ ಶೇ. 8.10 ನೀಡುತ್ತಿದ್ದು ಈಗ ಏಪ್ರೀಲ್ 1 ರ ನಂತರ ಶೇ. 8.70 ಬಡ್ಡಿ ದರ ನೀಡಲಾಗುವುದು.  ಹಣದುಬ್ಬರ ನಿರ್ವಹಿಸಲು ಇದು ಉತ್ತಮ ಠೇವಣಿ ಯೋಜನೆಯಾಗಿದ್ದು ಗ್ರಾಹಕರು ಈ ಯೋಜನೆಯ ಸದವಕಾಶ ಪಡೆಯಬಹುದೆಂದರು.
ಕಳೆದ ವರ್ಷ ಈ  ಭಾಗದಲ್ಲಿರುವ ಶೈತ್ಯಾಗಾರ ಗೋದಾಮುಗಳ ಜೊತೆ ಒಪ್ಪಂದ ಮಾಡಿಕೊಂಡು ಅಲ್ಲಿ ರೈತರು ಸಂಗ್ರಹಿಸಿದ ಕೃಷಿ ಉತ್ಪನ್ನಗಳ ಮೇಲೆ ಕಡಿಮೆ ಬಡ್ಡಿ ದರದಲ್ಲಿ ರೂ. 36 ಕೋಟಿ ಸಾಲವನ್ನು ವಿತರಿಸಿದ್ದೇವೆ.  ಆ ಮೂಲಕ ನಮ್ಮ ಭಾಗದ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಯಶಸ್ವಿಯಾಗಿದ್ದೇವೆಂದರು.
 ಈ ಸಂದರ್ಭದಲ್ಲಿ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಗಿರೀಶ್ ಎಮ್.ಆರ್ ಹಾಗೂ ಆಡಳಿತ ಮಂಡಳಿಯ ಕಾರ್ಯದರ್ಶಿ ವೆಂಕಟೇಶ್‍ರಾವ್ ಉಪಸ್ಥಿತರಿದ್ದರು.