ಸುಂಧಾಳ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಸ್ವೀಕಾರ

ಔರಾದ :ಆ.12: ತಾಲೂಕಿನ ಸುಂಧಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಾರುತಿ ನರಸಪ್ಪ ಸಿಂಗೋಡೆ, ಉಪಾಧ್ಯಕ್ಷರಾಗಿ ಶೋಭಾ ಮಲಗೊಂಡ ಇತ್ತೀಚೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಈ ವೇಳೆ ಅಧ್ಯಕ್ಷ-ಉಪಾಧ್ಯಕ್ಷರು ಕಚೇರಿ ಉದ್ಘಾಟಿಸಿದರು. ನಂತರ ಮಾತನಾಡಿದ ಗ್ರಾಪಂ ಅಧ್ಯಕ್ಷ ಮಾರುತಿ ನರಸಪ್ಪ, ಸುಂಧಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು. ಕಟ್ಟಿಕೊಂಡಿರುವ ಚರಂಡಿಗಳನ್ನು ಸ್ವಚ್ಛತೆಗೊಳಿಸುವ ಕಾರ್ಯ,ಕುಡಿಯುವ ನೀರು, ಪ್ರತಿಯೊಬ್ಬರಿಗೂ ವಿದ್ಯುತ್ ಮತ್ತು ಮನೆ ಇಲ್ಲದವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು.

ಈ ಹಿಂದಿನಿಂದಲೂ ನನಗೆ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲವಿತ್ತು. ಹೀಗಾಗಿ ಗ್ರಾಮಸ್ಥರ ಬೆಂಬಲದಿಂದ ಸದಸ್ಯನಾಗಿ ಆಯ್ಕೆಯಾದೆ. ಈಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ನನ್ನ ಅಧಿಕಾರವಧಿಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಒಳ್ಳೆ ಕೆಲಸ ಮಾಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು. ಸಾರ್ವಜನಿಕರು ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ತಾಪಂ ಸದಸ್ಯ ಗುಂಡಯ್ಯ ಸ್ವಾಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಅಮೃತರಾವ ಗಂಗೋಜಿ, ದಯಾನಂದ ಹಳ್ಳಿಖೇಡೆ, ಕಲಾವತಿ ಯನಗುಂದಾ ಅಧ್ಯಕ್ಷ-ಉಪಾಧ್ಯಕ್ಷರಿಗೆ ಶುಭ ಹಾರೈಸುವ ಮೂಲಕ ಮಾತನಾಡಿದರು.

ಪ್ರಮುಖರಾದ ಹಿರಿಯ ಪತ್ರಕರ್ತ ಶರಣಪ್ಪ ಚಿಟಮೇ, ರಘುನಾಥ್ ಪಾಟೀಲ್, ಪತ್ರಕರ್ತ ಚನ್ನಬಸವ ಮೊಕ್ತೆದಾರ್, ರಾವಸಾಬ್ ಪಾಟೀಲ್, ಗುರಯ್ಯ ಸ್ವಾಮಿ, ಕಾಮಶೆಟ್ಟಿ ಭಾಲ್ಕೆ, ರಾಮದಾಸ ಗೌಡಾ, ಜಗದೇವಿ ಸಂಗನಗೌಡಾ, ಬಾಬುರಾವ ಗಂಗೋಜೆ, ದಿಲೀಪ ನಂದ್ಯಾಳ, ದೇವಿದಾಸ ಪಾಟೀಲ್, ವಿಜಯ ಮೇತ್ರೆ, ಕೃಷ್ಣಾ ಕಾಂಬಳೆ, ರುಕ್ಮೀಣಿ, ಶಿವಕುಮಾರ ಮಜಿಗೆ, ಪುಟ್ಟು ಪಾಟೀಲ್, ಗಣಪತಿ ಸೇರಿದಂತೆ ಅನೇಕರಿದ್ದರು.
ಪಿಡಿಒ ಶರಣಪ್ಪ ಗಾದಗೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಭವುರಾವ ಪಾಟೀಲ್ ವಂದಿಸಿದರು.