ಸುಂದರ ಸಮಾಜ ನಿರ್ಮಾಣಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯ

ಕಲಬುರಗಿ, ಸೆ.11: ಸಮಾಜಕ್ಕೆ ಹಿರಿಯರು ಅನುಪಯುಕ್ತ ಮತ್ತು ಭಾರ ಎಂಬ ಮನೋಭಾವನೆ ಬೇಡ. ಅವರು ಸಮಾಜ, ದೇಶದ ಅವಿಭಾಜ್ಯ ಅಂಗ. ಕಿರಿಯರು, ಹಿರಿಯರಲ್ಲಿರುವ ಜ್ಞಾನ, ಬುದ್ಧಿ, ಅನುಭವವನ್ನು ಪಡೆದು ಮುನ್ನಡೆಯಬೇಕು. ಇದರಿಂದ ಬುದ್ಧಿವಂತ, ಹೃದಯವಂತ, ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಜಗತ್ ಬಡಾವಣೆಯ ಅಗಸ್ಥ್ಯತೀರ್ಥ ಅವಿಭಕ್ತ ಪರಿವಾರದ ಮನೆಯ ಪ್ರಾಂಗಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ‘ವಿಶ್ವ ಅಜ್ಜ-ಅಜ್ಜಿಯಂದಿರ ದಿನಾಚರಣೆ’ ಪ್ರಯುಕ್ತ ಅಜ್ಜ-ಅಜ್ಜಿಯಂದಿರಗೆ ಗೌರವಿಸಿ ಅವರು ಮಾತನಾಡುತ್ತಿದ್ದರು.
ಎಂತಹ ಸಂದರ್ಭದಲ್ಲಿಯೂ ವಯೋವೃದ್ಧರನ್ನು ವೃದ್ಧಾಶ್ರಮಕ್ಕೆ ನೂಕದೆ, ಅವರ ಜೊತೆಗಿದ್ದು ಆರೈಕೆ ಮಾಡಬೇಕು. ಹಿಂದಿನ ಕಾಲದಲ್ಲಿ ಮನೆಯಲ್ಲಿರುವ ಅಜ್ಜ-ಅಜ್ಜಿ ತಮ್ಮ ಮೊಮ್ಮಕ್ಕಳಿಗೆ ಕಥೆಗಳು, ಹಾಡುಗಳು, ಒಗಟುಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬಾಲ್ಯದಿಂದಲೇ ಬಿತ್ತುವ ಕಾರ್ಯ ಮಾಡುತ್ತಿದ್ದರು. ಅದನ್ನು ಆಲಿಸಿ ಬೆಳೆದವರು ಮುಂದೆ ತಮ್ಮ ಜೀವನದಲ್ಲಿ ಉತ್ತಮ ಸಂಸ್ಕಾರವಂತ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ಆದರೆ ಈಗಿನ ಮಕ್ಕಳು, ಯುವಕರು ಹಿರಿಯರ ಮಾತು ಕೇಳದೆ, ಮೋಬೈಲ್, ಟಿ.ವಿ ವೀಕ್ಷಣೆಯಲ್ಲಿ ಮುಳುಗುತ್ತಿರುವ, ವಿದೇಶಿ ಸಂಸ್ಕøತಿ ಅನುಸರಿಸಿ, ತಮ್ಮ ಪಾಲಕ-ಪೋಷಕರನ್ನು ವೃದ್ಧಾಶ್ರಮಕ್ಕೆ ನೂಕುತ್ತಿರುವುದು, ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನ್ಯಾಯವಾದಿ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ತಂದೆ-ತಾಯಿಯೇ ದೇವರು. ಯಾರು ತಮ್ಮ ಪಾಲಕ-ಪೋಷಕರನ್ನು ಚೆನ್ನಾಗಿ ಆರೈಕೆ ಮಾಡುವುದು, ಪ್ರೇಮದಿಂದ ಕಾಣುತ್ತಾರೋ, ಅವರು ದೇವರನ್ನು ಹುಡುಕಿಕೊಂಡು ಬೇರೆ ಎಲ್ಲಿಯೂ ಕೂಡಾ ಹೋಗಬೇಕಾದದ್ದು ಅಗತ್ಯವಿಲ್ಲ. ಒಂದು ವೇಳೆ ತಂದೆ-ತಾಯಿಗೆ ನೋವು ನೀಡಿ, ಜಗತ್ತಿನಲ್ಲಿ ನೀವು ಎಲ್ಲಿಗೇ ಹೋದರೂ, ಖಂಡಿತವಾಗಿಯೂ ನಿಮಗೆ ಒಳ್ಳೆಯದಾಗಲು ಸಾಧ್ಯವಿಲ್ಲೆ ಕಟುಸತ್ಯವನ್ನು ಪ್ರಸ್ತುತ ಯುವಜನತೆ ಮರೆಯಬಾರದು ಎಂದು ಮಾರ್ಮಿಕವಾಗಿ ನುಡಿದರು.
ಅಜ್ಜ-ಅಜ್ಜಿಯಂದಿರು, ಅವರ ಮಕ್ಕಳು, ಮೊಮ್ಮಕ್ಕಳು, ಮರಿ-ಮೊಮ್ಮಕ್ಕಳು ಇವರೆಲ್ಲರೂ ಒಂದೆಡೆ ಜೊತೆಗೂಡಿ ಸಂತೋಷಪಡುತ್ತಿದ್ದ ಸಂದರ್ಭ ಕಣ್ಣಿಗೆ ದೊಡ್ಡ ಹಬ್ಬವಾಗಿತ್ತು. ಇಂತಹ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾದವರು ಧನ್ಯತಾಭಾವ ವ್ಯಕ್ತಪಡಿಸಿದರು. ಹಿರಿಯರು ತಮ್ಮ ಅನುಭವವನ್ನು ಹಂಚಿಕೊಂಡರು. ಒಟ್ಟಾರೆಯಾಗಿ ಇದೊಂದು ತುಂಬಾ ವಿರಳವಾದ ಕಾರ್ಯಕ್ರಮ ಎಂದು ಆಗಮಿಸಿದ್ದ ಎಲ್ಲರೂ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.
ಶಾಂತಾಬಾಯಿ ಅಗಸ್ಥ್ಯತೀರ್ಥ, ಶಿವಲೀಲಾ ಅಗಸ್ಥ್ಯತೀರ್ಥ, ಮಹಾದೇವಿ ಅಗಸ್ಥ್ಯತೀರ್ಥ, ಮಲ್ಲಿಕಾರ್ಜುನ ಅಗಸ್ಥ್ಯತೀರ್ಥ, ನಾಗಭೂಷಣ ಅಗಸ್ಥ್ಯತೀರ್ಥ, ಶರಣ ಅಗಸ್ಥ್ಯತೀರ್ಥ, ಸಂಗಮೇಶ ಅಗಸ್ಥ್ಯತೀರ್ಥ, ಜಗದೇವಿ ಪಾಟೀಲ, ಜಗದೇವಿ ತೋಳನೂರ್, ಅನ್ನಪೂರ್ಣ ಪಾಟೀಲ, ಶ್ಲೋಕ್ ಪಾಟೀಲ, ಲಕ್ಷ್ಮೀ ಗೊಳೇದ್, ಶರಣ ದುಧನಿ ಸೇರಿದಂತೆ ಅಗಸ್ಥ್ಯತೀರ್ಥ ಪರಿವಾರದವರು, ಬಡಾವಣೆಯ ನಾಗರಿಕರು, ಮಹಿಳೆಯರು, ಮಕ್ಕಳು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.