
ಅಥಣಿ : ಮಾ.13:ಪ್ರತಿಯೊಬ್ಬರ ಬದುಕಿನಲ್ಲಿ ಅರಿವು ಹೊಂದಿದಾಗ ಬದುಕು ಸುಂದರವಾಗುತ್ತದೆ. ಅರಿವು ಹೊಂದಿದ ವ್ಯಕ್ತಿ ಗುರುವಾಗಿ ಬೆಳೆಯುತ್ತಾನೆ. ನಮ್ಮ ಬದುಕಿನ ಗೌರವವನ್ನು ಹೆಚ್ಚಿಸುವ ಶಕ್ತಿ ಅರಿವು ಆಗಿದೆ ಎಂದು ಸವದಿ ಮತ್ತು ಇಳಕಲ್ಲ ಸಂಸ್ಥಾನಮಠದ ಗುರು ಮಹಾಂತ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಸಂಕೋನಟ್ಟಿ ಗ್ರಾಮದ ನಂದೀಶ ವನದಲ್ಲಿ ಲಿಂ. ನಂದೇಪ್ಪ ಟೊಪಗಿ ಅವರ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಚಿಂತನಾಗೋಷ್ಠಿಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅರಿವು ಸಂಪಾದನೆ ಮಾಡಿಕೊಳ್ಳಬೇಕು. ಅರಿವುನಲ್ಲಿ ಕರುಣೆ ಮತ್ತು ದಯೆ ಇರುವುದರಿಂದ ಮನುಷ್ಯನಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ದೊರಕಲಿದೆ. ಆ ಅರಿವು ಸಂಪಾದಿಸಬೇಕಾದರೆ 12ನೇ ಶತಮಾನದಲ್ಲಿ ಶಿವಶರಣರು ಹೇಳಿದಂತೆ ಇಷ್ಟಲಿಂಗ ಪೂಜೆಯಿಂದ ಸಾಧ್ಯವಿದೆ. ಪ್ರತಿದಿನ ಇಷ್ಟಲಿಂಗ ಪೂಜೆ ಮಾಡುವುದರಿಂದ ಏಕಾಗ್ರತೆ ಹೆಚ್ಚಿಸುತ್ತದೆ. ಪ್ರತಿಯೊಬ್ಬರೂ ಕೊರಳಲ್ಲಿ ಲಿಂಗವನ್ನು ಧರಿಸುವ ಮೂಲಕ ತಮ್ಮ ಮಕ್ಕಳಿಗೂ ಲಿಂಗ ಪೂಜೆಯ ತರಬೇತಿ ನೀಡಬೇಕು. ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಾಗುವುದಲ್ಲದೆ ಉತ್ತಮ ಸಂಸ್ಕಾರವಂತರಾಗಿ ಬೆಳೆಯುತ್ತಾರೆ. ಇಷ್ಟು ಲಿಂಗ ಪೂಜೆಯ ಅರಿವು ಅವರಿಗೆ ಬಂದಾಗ ತಂದೆ ತಾಯಿಗೆ ಗೌರವ ನೀಡುವುದಲ್ಲದೆ ತಮ್ಮ ಗೌರವವನ್ನು ಕೂಡ ಹೆಚ್ಚಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಸುಕ್ಷೇತ್ರ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ನಂದಗಾವ ಭೂಕೈಲಾಸ ಆಶ್ರಮದ ಮಹಾದೇವ ಮಹಾರಾಜರು ಆಶೀರ್ವಚನ ನೀಡಿದರು. ಉಪನ್ಯಾಸಕಿ ಡಾ. ಮೈತ್ರಾಣಿ ಗದಿಗೆಪ್ಪಗೌಡರ, ಹಾರೂಗೇರಿಯ ಖ್ಯಾತ ಸಾಹಿತಿ ಡಾ. ವಿ ಎಸ್ ಮಾಳಿ ಉಪನ್ಯಾಸ ನೀಡುತ್ತಾ ತಂದೆ ತಾಯಿಯ ಮಹತ್ವ ಮತ್ತು ಇಂದಿನ ಒತ್ತಡದ ಬದುಕಿನಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಕಳಿಸಿಕೊಡುವ ವಿಚಾರಗಳ ಬಗ್ಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿ ಅನಂತ ಬಸರಿಕೋಡಿ, ಎಂ ಎನ್ ದರಿಗೌಡ, ರಾಜಶೇಖರ ಅಡಹಳ್ಳಿ, ಸಂಗಮೇಶ ಧರಿಗೌಡ, ಅಶೋಕ ಕೌಜಲಗಿ, ಡಿ ಸಿ ನಾಯಕ, ಮಲಗೌಡ ಪಾಟೀಲ, ಶಾಮು ಪೂಜಾರಿ, ನ್ಯಾಯವಾದಿ ಸುಭಾಷ ನಾಯಕ, ದಿಗ್ವಿಜಯ ಪವಾರ ದೇಸಾಯಿ, ಧರೆಪ್ಪ ಠಕ್ಕಣ್ಣವರ, ಬಸವರಾಜ ಬಿಸನಕೊಪ್ಪ, ಬಸವರಾಜ ಬುಟಾಳಿ, ಎನ್ ಜಿ ಪಾಟೀಲ, ಶ್ರೀಶೈಲ ನಾರಗೊಂಡ, ಸಿದ್ದರಾಯ ಯಲಡಗಿ, ರಮೇಶ ಚೌಗುಲೆ, ಮಹಾವೀರ ಪಡನಾಡ, ರಮೇಶಗೌಡ ಪಾಟೀಲ, ಪ್ರಕಾಶ ಪಾಟೀಲ, ರಾವಸಾಹೇಬ ಐಹೊಳೆ, ರಮೇಶ ಸಿಂದಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಜಶೇಖರ ಟೋಪಿಗಿ ಸ್ವಾಗತಿಸಿದರು. ಸಂಗಮೇಶ ಹಚ್ಚಡದ ನಿರೂಪಿಸಿದರು. ವಿಜಯ ಹುದ್ದಾರ ವಂದಿಸಿದರು.