ಸುಂದರ ಬದುಕನ್ನು ತೋರಿಸಿದ ಸರಳತೆಯ ಶ್ರೇಷ್ಠ ಸಂತ ಸಿದ್ದೇಶ್ವರ ಸ್ವಾಮೀಜಿ

ಶಹಾಬಾದ:ಜ.4: ಪ್ರಕೃತಿಯೇ ಬದುಕಿನ ಅವಶ್ಯಕತೆಗಳನ್ನ ನೀಗಿಸುತ್ತಿರುವಾಗ ಹಣದ ಅವಶ್ಯಕತೆ ಎಲ್ಲಿದೆ ಎಂದು ಜೇಬುಗಳೇ ಇಲ್ಲದ ಬಟ್ಟೆ ಧರಿಸಿ ಜನರಿಗೆ ತಮ್ಮ ನಡೆ ನುಡಿಗಳಲ್ಲೇ ಸುಂದರ ಬದುಕನ್ನು ತೋರಿಸಿದ ಸರಳತೆಯ ಶ್ರೇಷ್ಠ ಸಂತ ಸಿದ್ದೇಶ್ವರ ಸ್ವಾಮೀಜಿಯವರು ಎಂದು ನಗರಸಭೆಯ ಸದಸ್ಯ ಹಾಗೂ ಸುರಕ್ಷಾ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ.ಅಹ್ಮದ್ ಪಟೇಲ್ ಹೇಳಿದರು.

ಅವರು ಮಂಗಳವಾರ ನಗರದ ಸುರಕ್ಷಾ ಸೌಹಾರ್ದ ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಲಾದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಜಿಯವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಜನರಿಗೆ ಬದುಕು ಅಂದರೆ ಏನು ಅದನ್ನ ಹೇಗೆ ಅನುಭವಿಸಬೇಕು. ಬದುಕಿಗೆ ಹಣದ ಅವಶ್ಯಕತೆ ಎಷ್ಟಿದೆ. ಬದುಕಿನಲ್ಲಿ ಯಾವುದು ಮುಖ್ಯ ಅನ್ನೊದರ ಬಗ್ಗೆ ಲಕ್ಷಾಂತರ ಜನರಿಗೆ ಪ್ರವಚನ ನೀಡಿದ ಸಿದ್ದೇಶ್ವರರು ಈ ಶತಮಾನ ಕಂಡ ಶ್ರೇಷ್ಠ ಜ್ಞಾನಿ ಜೀವಿಗಳು.ಬದುಕಿನ ಬಹುತೇಕ ಸಮಯಯನ್ನ ಜನರಿಗೆ ಜ್ಞಾನ ಹಂಚುವುದಕ್ಕಾಗಿಯೇ ಮೀಸಲಿರಿಸಿ ನಿಸ್ವಾರ್ಥದ ಜೀವನವನ್ನ ನಡೆಸಿ ಉಳಿದವರಿಗೆ ಮಾದರಿಯಾಗಿ ನಿಂತರು, ಜನರು ದೇವರ ಸ್ಥಾನದಲ್ಲಿ ಇಟ್ಟಿರಬಹುದು ಆದರೆ ತಾನು ಕೂಡ ಸಾಮಾನ್ಯ ಮನುಷ್ಯ ತನಗೂ ಒಂದು ದಿನ ಸಾವು ಬಂದೇ ಬರುತ್ತೆ ಅವತ್ತು ಆಗಬೇಕಾದ ಕೆಲಸಗಳ ಬಗ್ಗೆ ಸುಮಾರು ವರ್ಷಗಳ ಹಿಂದೆಯೇ ಒಂದು ಪತ್ರದಲ್ಲಿ ಉಲ್ಲೇಖ ಮಾಡಿ, ಸತ್ತ ನಂತರ ಯಾವ್ಯಾವ ಕಾರ್ಯಗಳು ಎಷ್ಟು ಸರಳವಾಗಿ ನಡೆಯಬೇಕು ಎಂಬುದನ್ನ ಸ್ಪಷ್ಟವಾಗಿ ವ್ಯಕ್ತಪಡಿಸಿ ಮರಣದ ನಂತರ ಕೂಡ ಸರಳವಾಗೇ ಹೊರಟುಬಿಡಬೇಕು ಎಂಬ ಸಂದೇಶವನ್ನ ಸಮಾಜಕ್ಕೆ ಕೊಟ್ಟು ಮೌನವಾಗಿ ಹೊರಟುಬಿಟ್ಟರು.ಸಿದ್ದೇಶ್ವರ ಸ್ವಾಮೀಜಿಗಳು ಭೌತಿಕವಾಗಿ ಇಲ್ಲದ್ದಿದ್ದರೂ ಕೋಟ್ಯಂತರ ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ ಎಂದು ಹೇಳಿದರು.ಮಲ್ಲಿಕಾರ್ಜುನ ಸ್ವಾಮಿ, ಸಾಹೇಬಗೌಡ ಬೋಗುಂಡಿ,ನಿಂಗಣ್ಣ ಪೂಜಾರಿ, ಸತೀಶ ವೈದ್ಯ, ರಾಜು ಖಣದಾಳಕರ್,ಶರಣು ಮಡಿವಾಳ, ಪವನಕುಮಾರ ಇಂಗಳೆ,ರವಿ, ಕಾರ್ಯನಿರ್ವಾಹಣಾಧಿಕಾರಿ ನಿಂಗಣ್ಣ ಸಂಗಾವಿಕರ್ ಇತರರು ಇದ್ದರು.