
ಬೀದರ್:ಜು.14: ಯುವಕರು ಸ್ವಚ್ಛ ಹಾಗೂ ಸುಂದರ ಗ್ರಾಮಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಬೀದರ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಪರಮೇಶ್ವರ ನಾಯಕ್ ಹೇಳಿದರು.
ಬೀದರ್‍ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ತಾಲ್ಲೂಕಿನ ವಾಲ್ದೊಡ್ಡಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವೈಯಕ್ತಿಕ ಶೌಚಾಲಯ, ನೈರ್ಮಲ್ಯ, ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಯುವ ಜನರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಗೌತಮ ಅರಳಿ ಹೇಳಿದರು.
ಶಿಬಿರಾರ್ಥಿಗಳು ಏಳು ದಿನಗಳ ಅವಧಿಯಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಗ್ರಾಮಕ್ಕೆ ಕೊಡುಗೆ ನೀಡಿದ್ದಾರೆ. ಶಿಬಿರದಲ್ಲಿ ಶ್ರಮದಾನ, ಸಸಿ ನೆಡುವಿಕೆ, ಆರೋಗ್ಯ ತಪಾಸಣೆ ಶಿಬಿರ, ಸಂಚಾರ ನಿಯಮ, ಜನಸಂಖ್ಯಾ ಸ್ಫೋಟ, ನೈರ್ಮಲ್ಯ ಜಾಗೃತಿ ಮೊದಲಾದ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಮನೋಜಕುಮಾರ ತಿಳಿಸಿದರು.
ಮಂಜಮ್ಮ, ಅಶ್ವಿನಿ, ಭಾಗ್ಯಶ್ರೀ ಹಾಗೂ ಪುಷ್ಪಾ ಅವರಿಗೆ ಉತ್ತಮ ಸ್ವಯಂ ಸೇವಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆಶಾರಾಣಿ ಶಿಬಿರದ ವರದಿ ವಾಚಿಸಿದರು. ಡಾ. ಬಂಡಯ್ಯ ಸ್ವಾಮಿ ನಿರೂಪಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಎ ಘಟಕದ ಅಧಿಕಾರಿ ಶ್ರೀನಿವಾಸ ರೆಡ್ಡಿ ಸ್ವಾಗತಿಸಿದರು. ಬಿ ಘಟಕದ ಅಧಿಕಾರಿ ಡಾ. ವಿದ್ಯಾ ಪಾಟೀಲ ವಂದಿಸಿದರು.