ಸೀರೆ ಅಲ್ಲ, ನೀವು ಎಷ್ಟೇ ಕೋಟಿ ಕೊಟ್ಟರೂ ನಾವು ನಿಮಗೆ ವೋಟು ಹಾಕುವುದಿಲ್ಲ: ಮುಸ್ಲಿಂ ಮಹಿಳೆಯರ ಆಕ್ರೋಶ

ದಾವಣಗೆರೆ: ‘ನಿಮ್ಮ ಸೀರೆ, ಉಡುಗೊರೆ ಯಾವುದು ನಮಗೆ ಬೇಡ. ನೀವು ಎಷ್ಟೇ ಕೋಟಿ ಕೊಟ್ಟರೂ ನಾವು ನಿಮಗೆ ವೋಟು ಹಾಕುವುದಿಲ್ಲ’ ಇದು ಶಾಸಕ ಶಾಮನೂರು ಶಿವಶಂಕರಪ್ಪ ವಿರುದ್ಧ ಮುಸ್ಲಿಂ ಸಮುದಾಯದ ಮಹಿಳೆಯರು ಬಹಿರಂಗವಾಗಿ ಹೇಳಿರುವ ಮಾತುಗಳು.

ಹೌದು, ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಅದರಲ್ಲೂ ಮುಸ್ಲಿಮರೇ ಹೆಚ್ಚಾಗಿ ವಾಸಿಸುವ ಮಹಾನಗರ ಪಾಲಿಕೆಯ 12ನೇ ವಾರ್ಡಿನಲ್ಲಿ ಮುಸ್ಲಿಮರು ಡಾ.ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಮತ್ತೆ ಕಿಡಿ ಕಾರಿದ್ದಾರೆ. ಅಲ್ಲದೆ ಅವರು ಉಡುಗೊರೆಯಾಗಿ ನೀಡಿದ್ದ ಸೀರೆಗಳನ್ನು ಬೀದಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅವರು ಕಳೆದ ಐದಾರು ಚುನಾವಣೆಗಳಿಂದಲೂ ಇದು ನನ್ನ ಕೊನೆಯ ಚುನಾವಣೆ ಎಂದೇ ಹೇಳುತ್ತಲೇ ಪ್ರತಿಬಾರಿಯೂ ಮುಸ್ಲಿಂ ಸಮುದಾಯದ ಮತದಾರರಿಂದ ಓಟು ಪಡುತ್ತಿದ್ದಾರೆ.

83,000ಕ್ಕೂ ಹೆಚ್ಚು ಮತದಾರರು ಇರುವ ಈ ಭಾಗಕ್ಕೆ ಮುಸ್ಲಿಂ ಸಮುದಾಯದ ಯಾರಿಗಾದರೂ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು. ನಿಮ್ಮ ಸೀರೆ, ಉಡುಗೊರೆ ಯಾವುದು ನಮಗೆ ಬೇಡ. ನೀವು ಎಷ್ಟೇ ಕೋಟಿ ಕೊಟ್ಟರೂ ನಾವು ನಿಮಗೆ ವೋಟು ಹಾಕುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಮತದಾರರೇ ಹೆಚ್ಚಾಗಿರುವ ದಾವಣಗೆರೆಯ ಹಳೆಯ ನಗರದಲ್ಲಿ ನಾಲ್ಕು ಮಂದಿ ಮುಸ್ಲಿಮರು ಟಿಕೆಟ್ ಕೇಳಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿಲ್ಲ. ಅದರ ಬದಲಾಗಿ ಪ್ರತಿ ಬಾರಿಯೂ ಶಾಮನೂರು ಶಿವಶಂಕರಪ್ಪ ಅವರೇ ಸ್ಪರ್ಧೆ ಮಾಡುತ್ತಿದ್ದಾರೆ. ಈ ಬಾರಿ ಏನೇ ಮನವಿ ಮಾಡಿಕೊಂಡರೂ ನಾವು ಅವರಿಗೆ ಮತದಾನ ಮಾಡುವುದಿಲ್ಲ ಎಂದು ಕಿಡಿಕಾರಿದರು.

ಇದಲ್ಲದೆ ಕೇವಲ 50, 80ರೂಪಾಯಿ ಬೆಲೆಯ ಸೀರೆಗಳನ್ನು ಕೊಟ್ಟು ನಮ್ಮ ಮತವನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಈ ಬಾರಿ ಶಾಮನೂರು ಶಿವಶಂಕರಪ್ಪ ಅವರನ್ನು ಸೋಲಿಸಲು ನಾವು ಪ್ರತಿಜ್ಞೆ ಮಾಡಿದ್ದೇವೆ ಎಂದು ಬಹಿರಂಗವಾಗಿ ಹೇಳಿದರು.

ಮುಸ್ಲಿಮರೇ ಹೆಚ್ಚಾಗಿ ವಾಸಿಸುವ ಈ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ಹಲವಾರು ಬಾರಿ ಶಾಸಕ ಶಾಮನೂರು ಶಿವಶಂಕರಪ್ಪ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಈ ಬಾರಿ ನಾವು ಮುಸ್ಲಿಂ ಸಮುದಾಯದ ವ್ಯಕ್ತಿಯನ್ನೇ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತೇವೆ. ನಮ್ಮಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ನಾವುಗಳು ರಂಜಾನ್ ತಿಂಗಳ ಉಪವಾಸದ ಸಮಯದಲ್ಲಿ ಜಕಾತಿ ರೂಪದಲ್ಲಿ ಬಡವರಿಗೆ ಹಣ ನೀಡುತ್ತೇವೆ.‌ ಅದೇ ಮೊತ್ತದಷ್ಟೇ ಹಣದ ಬೆಲೆಯಿರುವ ಕಳಪೆ ಗುಣಮಟ್ಟದ ಸೀರೆಗಳನ್ನು ನೀಡುವ ಮೂಲಕ ನಮ್ಮ ನಮಗೆ ಅಪಮಾನ ಮಾಡಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಕಳೆದ ನಾಲ್ಕು ವರ್ಷಗಳಿಂದ ರಂಜಾನ್ ತಿಂಗಳಲ್ಲಿ ನಮಗೆ ಸೀರೆಗಳನ್ನು ಉಡುಗೊರೆಯಾಗಿ ನೀಡದ ಡಾ.ಶಾಮನೂರು ಶಿವಶಂಕರಪ್ಪ ಈ ಬಾರಿ ಚುನಾವಣೆ ಎದುರಾಗಿರುವ ಹಿನ್ನೆಲೆಯಲ್ಲಿ ರಂಜಾನ್ ಹಬ್ಬದ ನೆಪದಲ್ಲಿ ನಮ್ಮಗಳಿಗೆ ಸೀರೆಯನ್ನು ಹಂಚಲು ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಟ್ಟಾರೆ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿರುವ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಈ ಬಾರಿಯ ಚುನಾವಣೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.