ಸೀರಮ್ ಸಿಇಒಗೆ ಬೆದರಿಕೆ ಹಾಕಿದವರ ಹೆಸರು ಬಹಿರಂಗಕ್ಕೆ ಕಾಂಗ್ರೆಸ್ ಆಗ್ರಹ

ಮುಂಬೈ,ಮೇ.೩- ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಸಿಇಒ ಆದರ್ ಪೂನವಾಲ್ಲಾ ಅವರು ಲಸಿಕೆಗಳ ವಿತರಣೆಗೆ ಬೆದರಿಕೆ ಹಾಕಿರುವ ನಾಯಕರ ಹೆಸರನ್ನು ಬಹಿರಂಗ ಪಡಿಸುವಂತೆ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ಆಗ್ರಹಿಸಿದ್ದಾರೆ.
ಎಸ್‌ಐಐನ ಸಿಇಒ ಆದರ್ ಪೂನವಾಲ್ಲಾ ಅವರ ಭದ್ರತೆಗೆ ತಮ್ಮ ಪಕ್ಷವು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಆದರ್ ಪೂನವಾಲ್ಲಾ ಅವರು ಕೆಲವು ಹಿರಿಯ ಮುಖಂಡರು ಬೆದರಿಕೆ ಹಾಕಿದ್ದಾರೆ ಎಂದು ಹೇಳಿದರು. ಅವರ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ಕಾಂಗ್ರೆಸ್ ತೆಗೆದುಕೊಳ್ಳುತ್ತದೆ. ಆದರೆ ಈ ನಾಯಕರು ಯಾರು ಎಂದು ಅವರು ಸಾರ್ವಜನಿಕವಾಗಿ ತಿಳಿಸಬೇಕು ಎಂದಿದ್ದಾರೆ.
ಫೋನ್‌ನಲ್ಲಿ ನನಗೆ ಬೆದರಿಕೆ ಹಾಕಲಾಗಿದೆ ಎಂದು ಸಂದರ್ಶನವೊಂದರಲ್ಲಿ ಆದರ್ ಪೂನವಾಲ್ಲಾಹೇಳಿದ್ದು ಬೆದರಿಕೆ ಕರೆ ಸ್ವೀಕರಿಸಿದ ವ್ಯಕ್ತಿಯ ಹೆಸರನ್ನು ಅವರು ಬಹಿರಂಗಪಡಿಸಬೇಕು ಎಂದು ಪಟೋಲೆ ತಿಳಿಸಿದ್ದಾರೆ.
ಆದರ್ ಪೂನವಾಲ್ಲಾಗೆ ಅಖಿಲ ಭಾರತ ಆಧಾರದ ಮೇಲೆ ’ವೈ’ ವರ್ಗದ ಭದ್ರತೆಯನ್ನು ಒದಗಿಸುವಂತೆ ಗೃಹ ಸಚಿವಾಲಯವು ಕೆಲ ದಿನಗಳ ಹಿಂದೆ ಆದೇಶ ಹೊರಡಿಸಿದೆ.
ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ನಿರ್ದೇಶಕ, ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಏಪ್ರಿಲ್ ೧೬ ರಂದು ಪತ್ರ ಬರೆದು ಆದರ್ ಪೂನವಾಲ್ಲಾಗೆ ಭದ್ರತೆ ಕೋರಿ ಕೇಂದ್ರ ಸರ್ಕಾರದ ನಿರ್ಧಾರ ಕೈಗೊಂಡಿದ್ದಾರೆ ಕೊರೊನಾ ಲಸಿಕೆ ಸರಬರಾಜಿಗೆ ಸಂಬಂಧಿಸಿದಂತೆ ಪೂನವಾಲ್ಲಾ ವಿವಿಧ ಗುಂಪುಗಳಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿತ್ತು.