ಸೀಮಾ ಹೈದರ್ ವಿವಾಹ ಎಸ್‌ಐ ಸೇರಿ ಇಬ್ಬರ ಅಮಾನತು

ಲಖನೌ ಆ.೫- ಪಬ್ಜಿ ಗೇಮ್ ನಲ್ಲಿ ಪರಿಚಯವಾದ ಗೆಳೆಯನಿಗೋಸ್ಕರ ಅಕ್ರಮವಾಗಿ ಭಾರತಕ್ಕೆ ನುಸುಳಿರುವ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್ ಪ್ರಕರಣದಲ್ಲಿ ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) ಓರ್ವ ಇನ್ಸ್‌ಪೆಕ್ಟರ್ ಮತ್ತು ಹೆಡ್ ಕಾನ್‌ಸ್ಟೇಬಲ್ ಅವರನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಎಸ್‌ಎಸ್‌ಬಿ ಆದೇಶದಲ್ಲಿ ತಿಳಿಸಿದೆ.ಪಾಕಿಸ್ತಾನದಿಂದ ನೇಪಾಳ ಗಡಿ ದಾಟಿ ಸೀಮಾ ಹೈದರ್ ತನ್ನ ನಾಲ್ವರು ಮಕ್ಕಳೊಂದಿಗೆ ಮೇ ೧೩ರಂದು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರು. ಅಂದು ಭಾರತ-ನೇಪಾಳ ಗಡಿ ಮೂಲಕ ಬಸ್‌ನಲ್ಲಿ ಈ ಮಹಿಳೆ ಬಂದಿದ್ದಾರೆ. ೧,೭೫೧ ಕಿಮೀ ಉದ್ದದ ಗಡಿಯ ಕಾವಲು ಕಾಯುವ ಹೊಣೆಯನ್ನು ಎಸ್‌ಎಸ್‌ಬಿ ಹೊತ್ತಿದೆ. ಹೀಗಾಗಿ ಸೀಮಾ ಮತ್ತು ಆಕೆಯ ನಾಲ್ವರು ಮಕ್ಕಳು ಪ್ರಯಾಣಿಸುತ್ತಿದ್ದ ಬಸ್ ಅನ್ನು ಎಸ್‌ಎಸ್ಬಿಯ ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ತಪಾಸಣೆ ನಡೆಸಿದ್ದರು. ಆದರೂ, ಸೀಮಾ ಅವರನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದರು.
೪೩ನೇ ಬೆಟಾಲಿಯನ್ ಇನ್ಸ್‌ಪೆಕ್ಟರ್ ಸುಜಿತ್ ಕುಮಾರ್ ವರ್ಮಾ ಮತ್ತು ಹೆಡ್ ಕಾನ್‌ಸ್ಟೇಬಲ್ ಚಂದ್ರ ಕಮಲ್ ಕಲಿತಾ ಅಮಾನತಾದ ಎಸ್‌ಎಸ್ಬಿ ಸಿಬ್ಬಂದಿ. ಇವರು ಮೇ ೧೩ರಂದು ಸೀಮಾ ಮತ್ತು ಆಕೆಯ ನಾಲ್ಕು ಮಕ್ಕಳು ಖುನ್ವಾ ಗಡಿಯ ಮೂಲಕ ದೇಶಕ್ಕೆ ಪ್ರವೇಶಿಸಿದಾಗ ವಾಹನಗಳನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿದ್ದರು. ಆಗ ಕರ್ತವ್ಯದಲ್ಲಿದ್ದ ಈ ಇಬ್ಬರಿಗೆ ಸೀಮಾ ಬಳಿ ವೀಸಾ ಇಲ್ಲದಿದ್ದರೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ಕುರಿತು ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್‌ಎಸ್‌ಬಿ ಹೇಳಿದೆ.