‘ಸೀಫುಡ್ ಪಾರ್ಕ್’ ಯೋಜನೆ ಬಿಡದಿದ್ದಲ್ಲಿ ಉಗ್ರ ಹೋರಾಟ-ಎಚ್ಚರಿಕೆ

smart

ಪುತ್ತೂರು, ನ.೨೦- ಪುತ್ತೂರಿನ ಬನ್ನೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್‌ಗೆ ಮಂಜೂರುಗೊಂಡ ಸ್ಥಳದಲ್ಲಿ ಸೀಫುಡ್ ಪಾರ್ಕ್ ನಿರ್ಮಾಣ ಮಾಡಲು ಮುಂದಾಗುತ್ತಿರುವುದು ಜನರ ಆರೋಗ್ಯದ ಹಕ್ಕನ್ನು ಕಸಿಯುವ ಪ್ರಯತ್ನವಾಗಿದ್ದು, ಇದು ಶಾಸಕರಿಗೆ ಮತ್ತು ಸಂಸದರಿಗೆ ಮತ ನೀಡಿದ ಜನರಿಗೆ ದ್ರೋಹ ಬಗೆಯುವ ಕೆಲಸವಾಗಿದೆ. ತಕ್ಷಣವೇ ಈ ಯೋಜನೆಯನ್ನು ಕೈಬಿಡದಿದ್ದಲ್ಲಿ ಬನ್ನೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಪುತ್ತೂರು ಚಲೋ, ಬನ್ನೂರು ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.

ಗುರುವಾರ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಮೀಸಲಾಗಿರಿಸಿದ ಸ್ಥಳದಲ್ಲಿ ಇದೀಗ ಸೀಫುಡ್ ಪಾರ್ಕ್ ಮಾಡಲು ಹೊರಟಿರುವುದನ್ನು ವಿರೋಧಿಸಿ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ವತಿಯಿಂದ ಪುತ್ತೂರಿನ ಗಾಂಧೀಕಟ್ಟೆಯ ಬಳಿಯಲ್ಲಿ ಸ್ಥಳೀಯರು ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಮೀಸಲಿರಿಸಿದ ಜಾಗದಲ್ಲಿ ಸೀಫುಡ್ ನಿರ್ಮಾಣ ಮಾಡುವ ವಿಚಾರದಲ್ಲಿ ಜಿಲ್ಲೆಯ ಖಾಸಗಿ ಮೆಡಿಕಲ್ ಕಾಲೇಜ್‌ಗಳ ಪಿತೂರಿಯಿದೆ. ಅವರ ಲಾಬಿಗೆ ಮಣಿದಿರುವ ಇಲ್ಲಿನ ಶಾಸಕರ ಮತ್ತು ಸಂಸದರ ಹಿತಾಸಕ್ತಿಯು ಪ್ರಶ್ನಾರ್ಹವಾಗಿದೆ. ಶಾಸಕರಿಗೆ, ಸಂಸದರಿಗೆ ಇಚ್ಚಾಶಕ್ತಿ ಇದ್ದಲ್ಲಿ ಬನ್ನೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು. ಇದು ಜಿಲ್ಲೆಯ ಜನರ ಬೇಡಿಕೆಯಾಗಿದೆ. ಇಲ್ಲಿ ಕಾಲೇಜು ಸ್ಥಾಪಿಸಿ ಅದಕ್ಕೆ ನಮ್ಮೆಲ್ಲರಿಗೆ ಮಾರ್ಗದರ್ಶನ ನೀಡಿದ ದಾರ್ಶನಿಕರಾದ ಸಂತ ನಾರಾಯಣ ಗುರು ಸ್ವಾಮಿ ಅವರ ಹೆಸರನ್ನು ಇಡಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಬನ್ನೂರಿನಲ್ಲಿ ೪೪ ಎಕ್ರೆ ಜಾಗವನ್ನು ಸರಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಮೀಸಲಿಟ್ಟಿದ್ದು, ಇದೀಗ ಸಿ ಫುಡ್ ಪಾರ್ಕ್ ನಿರ್ಮಾಣದ ಪ್ರಸ್ತಾವನೆ ಬರುತ್ತಿದ್ದಂತೆ ಬನ್ನೂರು ವ್ಯಾಪ್ತಿಯ ಸ್ಥಳೀಯರು ಮಾತ್ರವಲ್ಲದೆ ಹಲವಾರು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಇದರ ಬದಲು ರೈತರಿಗೆ ಪೂರಕವಾದ ಅಡಿಕೆ, ಕೊಕ್ಕೋ ಗಾರ್ಬಲ್‌ಗಳನ್ನು ಮಾಡಿದ್ದರೆ ರೈತರಿಗಾದರೂ ಅನುಕೂಲವಾಗುತ್ತಿತ್ತು.

ಬನ್ನೂರು ಪಂಚಾಯತ್ ಮಟ್ಟದಿಂದ ಆರಂಭಗೊಂಡು ಕೇಂದ್ರ ಸರ್ಕಾರದ ತನಕವೂ ಬಿಜೆಪಿ ಅಧಿಕಾರದಲ್ಲಿದೆ ಆದರೆ ಶಾಸಕರಿಗೆ, ಸಂಸದರಿಗೆ, ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲದಿರುವ ಕಾರಣ ಇಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿಲ್ಲ. ಇದೀಗ ಆ ಯೋಜನೆಯನ್ನು ಕೈಬಿಟ್ಟು ಸೀಫುಡ್ ಪಾರ್ಕ್ ನಿರ್ಮಿಸಲು ಮುಂದಾಗಿ ಮೀನಿನ ವ್ಯಾಪಾರಕ್ಕೆ ಹೊರಟಿರುವುದು ಸರಿಯಲ್ಲ. ಇದರಿಂದ ಗಂಭೀರ ಪರಿಣಾಮ ಉಂಟಾಗಲಿದೆ. ಸಿ ಫುಡ್ ಪಾರ್ಕ್ ನಿರ್ಮಾಣಗೊಂಡಲ್ಲಿ ಅಲ್ಲಿ ಉತ್ಪಾಧನೆಯಾಗಲಿರುವ ಟನ್‌ಗಟ್ಟಲೆ ಮೀನಿನ ತ್ಯಾಜ್ಯ ಹಾಗೂ ತ್ಯಾಜ್ಯ ನೀರುಗಳನ್ನು ಕುಮಾರಧಾರ ನದಿಗೇ ಬಿಡಬೇಕಾಗುತ್ತದೆ. ಇದರಿಂದ ಕುಡಿಯುವ ನೀರು ಒದಗಿಸುವ ಕುಮಾಧಾರ ಮಲೀನಗೊಳ್ಳಲಿದೆ ಎಂದು ಹೇಳಿದರು.  ಸಭೆಯಲ್ಲಿ ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರಾದ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಅಶ್ರಫ್ ಕಲ್ಲೇಗ, ರವಿಕಿರಣ ಪುಣಚ, ಶ್ರೀಧರ ಶೆಟ್ಟಿ ಬೈಲುಗುತ್ತು, ಶಿವಣ್ಣ ಗೌಡ ಇಡ್ಯಾಡಿ, ಗಿರಿಧರ ನಾಯ್ಕ್, ಐ.ಸಿ. ಕೈಲಾಸ್, ಪ್ಯಾಟ್ರಿಕ್ ಸಿಪ್ರಿಯಾನ್, ಯು.ಟಿ. ತೌಸೀಫ್, ಸುದರ್ಶನ ಗೌಡ ಕಂಪ, ಪ್ರಭಾಕರ ಸಾಲ್ಯಾನ್, ಅಶ್ರಫ್ ಕೊಟ್ಯಾಡಿ, ರಾಮಣ್ಣ ವಿಟ್ಲ, ಅಪ್ತಾಫ್ ತುಂಬೆ, ಕೃಷ್ಣ ನಿಡ್ಪಳ್ಳಿ, ಲ್ಯಾನ್ಸಿ ಮಸ್ಕರೇನಸ್, ಸದಾನಂದ ಶೆಟ್ಟಿ ಕೂರೇಲು, ಕೇಶವ ಪೂಜಾರಿ ಬೆದ್ರಾಳ, ತುಳಸೀದಾಸ್, ಇಬ್ರಾಹಿಂ ಗೋಳಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.