‘ಸೀಫುಡ್ ಪಾರ್ಕ್’ಗೆ ಹೊಸ ಜಾಗ ಹುಡುಕಿ: ಶಾಸಕಿ ಶಕುಂತಳಾ ಶೆಟ್ಟಿ

ಪುತ್ತೂರು, ನ.೨೦- ಪುತ್ತೂರಿನಲ್ಲಿ ಸಿ ಫುಡ್ ಪಾರ್ಕ್ ನಿರ್ಮಾಣಕ್ಕೆ ನಮ್ಮಿಂದ ಯಾವುದೇ ವಿರೋಧವಿಲ್ಲ. ಆದರೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲಿ ಈ ಉದ್ದಿಮೆ ಸ್ಥಾಪನೆಗೆ ನಮ್ಮ ವಿರೋಧವಿದೆ. ಸೀಫುಡ್ ಪಾರ್ಕ್ ನಿರ್ಮಾಣಕ್ಕೆ ಬೇರೆ ಸ್ಥಳ ಹುಡುಕಿಕೊಳ್ಳಿ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಹಾಲಿ ಶಾಸಕರಿಗೆ ತಿಳಿಸಿದ್ದಾರೆ.

 ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ನಾನು ಶಾಸಕಿಯಾಗಿದ್ದ ಸಂದರ್ಭ ಬನ್ನೂರಿನಲ್ಲಿ ೪೦ ಎಕ್ರೆ ಜಾಗವನ್ನು ಗುರುತಿಸಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದೇನೆ. ಆದರೆ ಇದೀಗ ಈ ಜಾಗವನ್ನು ಸೀಫುಡ್ ಪಾರ್ಕ್ ಎಂಬ ಉದ್ದಿಮೆಗೆ ಬಳಸುವುದರ ಒಳಗುಟ್ಟು ಪ್ರಶ್ನಾರ್ಹವಾಗಿದೆ. ತಮ್ಮದೇ ಪಕ್ಷದ ಸರ್ಕಾರ, ಶಾಸಕರು, ಸಂಸದರು ಇರುವಾಗ ಸಿ ಫುಡ್ ಪಾರ್ಕ್ ನಿರ್ಮಾಣಕ್ಕೆ ಹೊಸ ಜಾಗ ಹುಡುಕುವ ಪ್ರಯತ್ನ ಮಾಡದೇ ಕಾದಿರಿಸಿದ ಜಾಗವನ್ನು ಬಳಸುವ ಮೂಲಕ ತಪ್ಪು ಮಾಡಿದ್ದಾರೆ. ಶಾಸಕರು ಮತ್ತು ಸಂಸದರು ಖಾಸಗಿ ಮೆಡಿಕಲ್ ಕಾಲೇಜ್‌ನವರೊಂದಿಗೆ ಶಾಮೀಲಾಗಿದ್ದಾರೆ ಎಂಬ ಶಂಕೆ ಇದರಿಂದ ವ್ಯಕ್ತವಾಗುತ್ತಿದೆ ಎಂದರು.

ಈಗಾಗಲೇ ಉಪ್ಪಿನಂಗಡಿಗೆ ಕಾಲೇಜೊಂದನ್ನು ರಾಮ್‌ಭಟ್ ನೀಡಿದ್ದಾರೆ. ಪುತ್ತೂರಿನಲ್ಲಿ ಮೊರಾರ್ಜಿ ದೇಸಾಯಿ ಶಾಲೆ, ಏಳು ಹಾಸ್ಟೇಲ್, ಕಾಲೇಜುಗಳನ್ನು ಪುತ್ತೂರಿಗೆ ತರುವ ಮೂಲಕ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಅಭಿವೃದ್ಧಿ ಕೆಲಸಕ್ಕೆ ಆದ್ಯತೆ ನೀಡಿದ್ದೇನೆ. ಆದರೆ ಈಗಿನ ಶಾಸಕರು ನಾನು ಮಾಡಿದ್ದ ಅಭಿವೃದ್ಧಿ ಕೆಲಸದಲ್ಲಿ ಟೇಪು ಕತ್ತರಿಸುವ ಕೆಲಸವನ್ನಷ್ಟೇ ಮಾಡಿದ್ದಾರೆ ಎಂದು ಅವರು ಹೇಳಿದರು.

ಈಗಾಗಲೇ ನನ್ನ ಅವಧಿಯಲ್ಲಿ ಪುತ್ತೂರಿನ ಪ್ರಗತಿ ನಿಟ್ಟಿನಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್‌ಗೆ ಮೂರು ಕೋಟಿ, ಮಹಿಳಾ ಕಾಲೇಜಿಗೆ ನಾಲ್ಕು ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು, ಅದನ್ನು ಈಗಿನ ಶಾಸಕರು ಹಿಂದಿನವರು ತಂದದ್ದನ್ನು ಇಲ್ಲವಾಗಿಸುವ ಉದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿದರು. 

ಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಇದ್ದರು.