ಸೀನು ಮುಖದಲ್ಲಿ ಗೆಲುವಿನ ಮಂಹದಾಸ..

ನಿರ್ದೇಶಕ ಸ್ಮೈಲ್ ಶ್ರೀನು ಮತ್ತು  ನಿರ್ಮಾಪಕ ಜಿ. ರಾಮಾಂಜಿನಿ ಜೋಡಿ, ಬಹುಕೋಟಿ ವೆಚ್ಚದಲ್ಲಿ  ತೆರೆಗೆ ತಂದಿರುವ “ಓ ಮೈಲವ್ “ ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರತಂಡದ ಮುಖದಲ್ಲಿ ಮಂದಹಾಸ ಮನೆ ಮಾಡಿದೆ.

ಈ ವಾರವೂ 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು ಮತ್ತಷ್ಟು ಚಿತ್ರಮಂದರಿಗಳಿಂದ ಬೇಡಿಕೆ ಬಂದಿದೆ. ಅಲ್ಲದೆ ಚಿತ್ರಮಂದಿರದಲ್ಲಿ ಚಿತ್ರ ನೋಡಿ ಹೊರಬಂದ ಪ್ರೇಕ್ಷಕರು ಉತ್ತಮ ಚಿತ್ರ ಮಾಡಿದ್ದೀರಿ ಎನ್ನುವ ಮೆಚ್ಚುಗೆ ವ್ಯಕ್ತಪಡಿಸಿದ್ದು ಶ್ರೀನು ಅವರಲ್ಲಿ ಹೊಸ ಚಿತ್ರ ಕೈಗೆತ್ತಿಕೊಳ್ಳುವ ಆತ್ಮವಿಶ್ವಾಸ ಹೆಚ್ಚು ಮಾಡಿದೆ.

ಅದರಲ್ಲಿಯೂ ಕುಟುಂಬ ಸಮೇತ ಆಗಮಿಸಿ ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಸ್ಮೈಲ್ ಶ್ರೀನು, ನಮ್ಮ ಕಥೆಗೆ ಸ್ಟಾರ್ ಅಥವಾ ಸ್ಟಾರ್ ನಟನ ಮಕ್ಕಳು ಚಿತ್ರದಲ್ಲಿ ನಟಿಸಿದರೆ ಚೆನ್ನ ಅನ್ನಿಸಿತ್ತು.ಅದರಂತೆ ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ಅವರನ್ನು ನಾಯಕನ್ನಾಗಿ ಆಯ್ಕೆ ಮಾಡಿಕೊಂಡು ಸಾಕಷ್ಟು ತರಬೇತಿ ನೀಡಿದರಿಂದ ಅಕ್ಷಿತ್ ತೆರೆಯ ಮೇಲೆ  ಜನ ಮೆಚ್ಚುವ ರೀತಿ ಕೆಲಸ ಮಾಡಿದ್ದಾರೆ. ಇದಕ್ಕಾಗಿ ಸಾಕಷ್ಟು ಶ್ರಮಿಸಿದ್ದೇವೆ ಎಂದರು.

ಉತ್ತಮ ಚಿತ್ರ ಮಾಡಿದ ಖುಷಿ ಇದೆ. ನಾಯಕ ಅಕ್ಷಿತ್ ಅವರಿಗೆ ವೇದಿಕೆ ನಿರ್ಮಾಣ ಮಾಡಿಕೊಟ್ಟಿದ್ದೇವೆ. ಚಿತ್ರರಂಗದಲ್ಲಿ ಬೆಳೆಯುವುದು ಇನ್ನೂ ಅವರಿಗೆ ಬಿಟ್ಟದ್ದು. ತೆಲುಗಿನಲ್ಲಿಯೂ ಓ ಮೈ ಲವ್ ಬಿಡುಗಡೆಯಾಗಲಿದೆ. ಪರಿಚಯದವರು ಬಿಡುಗಡೆ ಮಾಡುತ್ತಿದ್ದಾರೆ. ಆ ಬಳಿಕ ತಮಿಳು, ಮಲೆಯಾಳಂ ಮತ್ತು ಹಿಂದಿಯಲ್ಲಿ ತೆರೆಗೆ ಬರಲಿದೆ.ಚಿತ್ರದಲ್ಲಿ ಹಿರಿಯ ಕಲಾವಿದರಾದ ಎಸ್. ನಾರಾಯಣ್ ಸೇರಿದಂತೆ ಎಲ್ಲ ಕಲಾವಿದರು ಉತ್ತಮವಾಗಿ ಅಭಿನಯಿಸಿದ್ದಾರೆ ಎಂದರು.

ನಿರ್ಮಾಪಕ ಜಿ. ರಾಮಾಂಜಿನಿ ಅವರು ಮತ್ತೊಂದು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದರ ಸಿದ್ದತೆ ಮತ್ತು ಇತರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಿಂದ ನಿರ್ದೇಶನ ಮಾಡಲು ಆಫರ್ ಬಂದಿದೆ. ಕಥೆ ನೋಡಿಕೊಂಡು ನಿರ್ಧಾರ ಮಾಡುತ್ತೇವೆ.