ಸೀತಾರಾಂ, ಉಮಾಶ್ರೀ, ಸುಧಾಮ್ ಮೇಲ್ಮನೆ ನಾಮ ನಿರ್ದೇಶನಕ್ಕೆ ಸಿಎಂ ಶಿಫಾರಸು

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೧೬:ವಿಧಾನ ಪರಿಷತ್‌ಗೆ ಮಾಜಿ ಸಚಿವರಾದ ಎಂ.ಆರ್. ಸೀತಾರಾಮ್ ಉಮಾಶ್ರೀ ಮತ್ತು ನಿವೃತ್ತ ಐಆರ್‌ಎಸ್ ಅಧಿಕಾರಿ ಸುಧಾಮ್‌ದಾಸ್ ಅವರನ್ನು ನಾಮನಿರ್ದೇಶನ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಖಾಲಿ ಇರುವ ಮೂರು ಸ್ಥಾನಗಳಿಗೆ ಶಿಕ್ಷಣ ಕ್ಷೇತ್ರದಿಂದ ಎಂ.ಆರ್ ಸೀತಾರಾಮ್, ಕಲಾಕ್ಷೇತ್ರದಿಂದ ಉಮಾಶ್ರೀ, ಮತ್ತು ಸಮಾಜ ಸೇವೆ ಕ್ಷೇತ್ರದಿಂದ ಸುಧಾಮ್‌ದಾಸ್ ಅವರನ್ನು ನಾಮಕರಣ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇಂದು ರಾಜ್ಯಪಾಲರಿಗೆ ಶಿಫಾರಸ್ಸು ಪಟ್ಟಿಯನ್ನು ಕಳುಹಿಸಿದ್ದಾರೆ.
ವಿಧಾನ ಪರಿಷತ್‌ಗೆ ಎಂ.ಆರ್. ಸೀತಾರಂ, ಉಮಾಶ್ರೀ ಮತ್ತು ಸುಧಾಮ್‌ದಾಸ್ ಇವರುಗಳನ್ನು ನಾಮನಿರ್ದೆಶನ ಮಾಡಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿತು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇಂದು ರಾಜ್ಯಪಾಲರಿಗೆ ಮೂವರು ನಾಮನಿರ್ದೇಶನ ಸದಸ್ಯರ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿದ್ದು, ಈ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ ನಂತರ ಉಮಾಶ್ರಿ ಸೀತಾರಾಂ, ಸುಧಾಮ್‌ದಾಸ್ ಇವರುಗಳು ವಿಧಾನ ಪರಿಷತ್‌ನ ಸದಸ್ಯರಾಗಲಿದ್ದಾರೆ.
ವಿಧಾನ ಪರಿಷತ್‌ನ ನಾಮಕರಣಗೊಳ್ಳಲು ಕಾಂಗ್ರೆಸ್‌ನಲ್ಲಿ ಪೈಪೋಟಿಯೇ ಇತ್ತು, ಕಾಂಗ್ರೆಸ್‌ನ ಕೇಂದ್ರದ ಮಾಜಿ ಸಚಿವ ರೆಹಮಾನ್‌ಖಾನ್ ಅವರ ಪುತ್ರ ಮನ್ಸೂರ್ ಅಲಿಖಾನ್ ಅವರ ಹೆಸರು ಮುನ್ನಲೆಗೆ ಬಂದಿತ್ತಾದರೂ ಅಂತಿಮವಾಗಿ ಮನ್ಸೂರ್ ಅಲಿಖಾನ್ ಬದಲು ಉಮಾಶ್ರೀ ಅವರನ್ನು ನಾಮನಿರ್ದೇಶನ ಮಾಡಲು ಹೈಕಮಾಂಡ್ ಒಪ್ಪಿದೆ.
ಉಮಾಶ್ರೀ ಅವರನ್ನು ನಾಮನಿರ್ದೇಶನ ಮಾಡಲು ಒಪ್ಪಿಗೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಹಾಗೆಯೇ ನಿವೃತ್ತ ಐಆರ್‌ಎಸ್ ಅಧಿಕಾರಿ ಸುಧಾಮ್‌ದಾಸ್ ಅವರಿಗೆ ರಾಹುಲ್ ಅವರ ಆರ್ಶೀವಾದವಿತ್ತು. ಹೀಗಾಗಿ ಮನ್ಸೂರ್ ಅಲಿಖಾನ್ ಅವರ ಹೆಸರನ್ನು ಕೈಬಿಟ್ಟು ಉಮಾಶ್ರೀ, ಎಂ.ಆರ್. ಸೀತಾರಂ ಹಾಗೂ ಸುಧಾಮ್‌ದಾಸ್ ಅವರ ನಾಮನಿರ್ದೇಶನ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದೆ.
ನಾಮನಿರ್ದೇಶನಕ್ಕೆ ಶೀಪಾರಸ್ಸು ಮಾಡಿರುವ ಮೂವರ ಪೈಕಿ ಎಂಆರ್ ಸೀತಾರಾಮ್ ಮತ್ತು ಉಮಾಶ್ರೀ ಹಿಂದುಳಿದ ವರ್ಗಕ್ಕೆ ಸೇರಿದ್ದು, ಸುಧಾಮ್‌ದಾಸ್ ಅವರುಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಸೇರಿದ್ದಾರೆ.ಸುಧಾಮ್‌ದಾಸ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಯಂ ನಿವೃತ್ತಿ ಪಡೆದು ನೆಲಮಂಗಲ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.ಕೊನೆಘಳಿಗೆಯಲ್ಲಿ ಟಿಕೆಟ್ ಕೈತಪ್ಪಿತು. ಹಾಗಾಗಿ ರಾಹುಲ್‌ಗಾಂಧಿ ಅವರ ಆಪ್ತರಾದ ಸುಧಾಮ್‌ದಾಸ್ ನಾಮನಿರ್ದೇಶನ ಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ,ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಲ್ಲೇಶ್ವರ ಕ್ಷೇತ್ರದಿಂದ ಟಿಕೆಟ್ ತ್ಯಾಗ ಮಾಡಿದ್ದ ಎಂ.ಆರ್. ಸೀತಾರಾಂ ಅವರಿಗೂ ಪರಿಷತ್ ಸದಸ್ಯರಾಗಲು ಹೈಕಮಾಂಡ್ ಅವಕಾಶ ಮಾಡಿಕೊಟ್ಟಿದೆ.