ಸೀತನೂರ ಉರ್ದು ಶಾಲೆ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಕಲಬುರಿ,ಜು.11- ತಾಲೂಕಿನ ಸೀತನೂರ ಗ್ರಾಮದ ಸರ್ಕಾರಿ ಕಿರಿಯ ಉರ್ದು ಶಾಲೆಯ ವಿದ್ಯಾರ್ಥಿಗಳು ತಮ್ಮ 6ನೇ ಮತ್ತು, 7, 8ನೇ ತರಗತಿಯನ್ನು ಇದೇ ಶಾಲೆಯಲ್ಲಿ ಪೂರ್ಣಗೊಳಿಸಲು ಪರ್ಯಾಯ ವ್ಯವಸ್ಥೆ ಕೈಗೊಳ್ಳುವಂತೆ ಆಗ್ರಹಿಸಿ ನಂದಿಕೂರ ಗ್ರಾಪಂ ಮಾಜಿ ಅಧ್ಯಕ್ಷ ಪವನ ಕುಮಾರ ವಳಕೇರಿ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ಕೈಗೊಂಡು ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಸೀತನೂರ ಗ್ರಾಮದ ಉರ್ದು ಶಾಲೆಯಲ್ಲಿ 1ರಿಂದ 5ನೇ ತರಗತಿಯ ವರೆಗೆ ಕಲಿಯುವ ಮಕ್ಕಳು ಮುಂದಿನ ವಿದ್ಯಾಭ್ಯಾಸಕ್ಕಾಗಿ ಪಾಣೆಗಾಂವ ಉರ್ದು ಶಾಲೆಗೆ ಇಲ್ಲವೇ ಕಲಬುರಗಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಗ್ರಾಮದ ಹೆಚ್ಚಿನ ಮಕ್ಕಳು ಪಾಣೆಗಾಂವ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ, ದಿನನಿತ್ಯ ಈ ಊರಿಗೆ ಹೋಗಿ ಬರಲು ತೊಂದರೆಯಾಗುತ್ತಿದೆ. 2 ಕಿ,ಮಿ ದೂರದ ರಾಷ್ಟ್ರೀಯ ಹೆದ್ದಾರಿಯನ್ನು ದಾಟುವಾಗ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಸೀತನೂರ ಶಾಲೆಯನ್ನು ಮೇಲ್ದರ್ಜೆಗೆ ಏರಿಸಬೇಕು, ಅಲ್ಲಿಯ ವರೆಗೆ ಇದೇ ಶಾಲೆಯಲ್ಲಿ 6, 7ನೇ ತರಗತಿ ಕಲಿಯಲು ಶಿಕ್ಷಕರನ್ನು ನಿಯೋಜಿಸಬೇಕು ಎಂಬ ಬೇಡಿಕೆಯ ಮನವಿ ಪತ್ರವನ್ನು ಪವನಕುಮಾರ ವಳಕೇರಿ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಒತ್ತಾಯಿಸಿದ್ದಾರೆ.