
ಕೆ.ಆರ್.ಪುರ,ಆ.೧- ಮುಂದಿನ ತಲೆಮಾರಿಗೆ ಪರಿಸರ ಸಂರಕ್ಷಿಸುವ ಸಂಕಲ್ಪದೊಂದಿಗೆ ಮಾರಸಂದ್ರ ಮೀಸಲು ಅರಣ್ಯ ಪ್ರದೇಶದಲ್ಲಿ ಶಾಂತ ಕೃಷ್ಣಮೂರ್ತಿ ಫೌಂಡೇಷನ್ ವತಿಯಿಂದ ಸೀಡ್ ಬಾಲ್ ಗಳ ತಯಾರಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್ ಸಂಸ್ಥೆಯ ಅಧ್ಯಕ್ಷೆ ಶಾಂತ ಕೃಷ್ಣಮೂರ್ತಿ ತಿಳಿಸಿದರು.
ಮಾರಸಂದ್ರ ಮೀಸಲು ಅರಣ್ಯ ಪದೇಶದಲ್ಲಿ ಹಮ್ಮಿಕೊಂಡಿದ್ದ ಸೀಡ್ ಬಾಲ್ ಅಭಿಯಾನದಲ್ಲಿ ಶಾಂತ ಕೃಷ್ಣಮೂರ್ತಿ ಮಾತನಾಡಿ ಕಾಡು ಉಳಿದರೆ ನಾಡು ಉಳಿಯುತ್ತದೆ, ಈ ನಿಟ್ಟಿನಲ್ಲಿ ಕಾಡಿನ ಸಂರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.
ನಿವೃತ್ತ ಅರಣ್ಯಾಧಿಕಾರಿ ಮೋಹನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಕಣ್ಮರೆಯಾಗುತ್ತಿದೆ, ಇದರ ಪರಿಣಾಮ ಜಾಗತಿಕ ತಾಪಮಾನದಲ್ಲಿ ಏರಿಕೆ ಉಂಟಾಗಿ ಪ್ರವಾಹದಂತಹ ಭೀಕರ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ, ಪರಿಸರ ಪ್ರೇಮ ಪ್ರತಿಯೊಬ್ಬರಲ್ಲೂ ಮೂಡಿದಾಗ ಮಾತ್ರ ಪರಿಸರ ಸಂರಕ್ಷಣೆ ಮಾಡಲು ಸಾಧ್ಯ,ಮುಂದಿನ ತಲೆಮಾರಿಗೆ ಉತ್ತಮವಾದ ಪರಿಸರವನ್ನು ಕೊಡುಗೆಯಾಗಿ ನೀಡುವ ದೃಢ ಸಂಕಲ್ಪ ಹೊಂದಬೇಕಾಗಿದೆ, ಈ ನಿಟ್ಟಿನಲ್ಲಿ ಕಾಡು ಉಳಿಸಿ ಬೆಳಸುವ ಸಂಸ್ಕೃತಿಯನ್ನು ರೂಡಿಸಿಕೊಳ್ಳಬೇಕು, ಎಂದರು. ಪ್ರತಿಯೊಬ್ಬರೂ ತಮ್ಮ ಸ್ವಾರ್ಥದ ಮನೋಭಾವನೆಯನ್ನು ಬದಿಗಿಟ್ಟು ಉತ್ತಮ ಪರಿಸರಕ್ಕಾಗಿ ತಮ್ಮ ಮನೆ ಅಂಗಳ,ರಸ್ತೆ ಬದಿ,ಕೆರೆಗಳಲ್ಲಿ ಸಸಿಗಳನ್ನು ನೆಡುವ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅರಣ್ಯ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಸೀಡ್ ಬಾಲ್ ತಯಾರಿಸುವ ವಿನೂತನ ಅಭಿಮಾನ ಸಾವಿರಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಅರಳಿಮರ,ಆಲದಮರ,ಕಾಡು ಬಾದಾಮಿ, ಗೋಣಿಮರ,ಹುಣ್ಣೆಸೆ ಮರ, ಸಪೋಟ್, ಕಸ್ಟ್ರಡ್ ಆಪಲ್, ಹಲಸಿನ ಮರ, ಬೇವಿನಮರ, ನೇರಳೆ ಸೇರಿದಂತೆ ವಿವಿಧ ಬಗೆಯ ಪ್ರಭೇದದ ಒಳಗೊಂಡ ಐದು ಸಾವಿರಕ್ಕೂ ಅಧಿಕ ಬೀಜದ ಉಂಡೆಗಳನ್ನು ತಯಾರಿಸಿ ಸಂಭ್ರಮಿಸಿದರು, ನಂತರ ಅರಣ್ಯ ಪ್ರದೇಶದಲ್ಲಿ ಸೀಡ್ ಬಾಲ್ ಗಳನ್ನು ಬಿತ್ತನೆ ಮಾಡುವ ಮೂಲಕ ಪರಿಸರ ಪ್ರೇಮ ಮೆರೆದರು.
ಅಭಿಯಾನದಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಅಭಿಯಾನದಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಶಾಂತ ಕೃಷ್ಣಮೂರ್ತಿ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷೆ ಉಚಿತವಾಗಿ ಹೂವಿನ ಸಸಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ , ಬಣಸವಾಡಿ ಎ.ಸಿ.ಪಿ. ಉಮಾಶಂಕರ್. ಕಲ್ಕೆರೆ ಕೃಷ್ಣಮೂರ್ತಿ, ಅಂಬರೀಶ್ ಪಾಲ್ಗೊಂಡಿದ್ದರು.