ಸಿ.ಸಿ ರಸ್ತೆ, ಡ್ರೈನೇಜ್ ಕಾಮಗಾರಿಗಳಿಗೆ ನಾಗರಿಕರೂ ಸಹಕಾರ ಕೊಡಬೇಕುಃ ಯತ್ನಾಳ

ವಿಜಯಪುರ, ಜ.3-ನಗರದಲ್ಲಿ ಎಲ್ಲ ಕಡೆ ಸಿ.ಸಿ ರಸ್ತೆ, ಡ್ರೈನೇಜ್ ಮಾಡುವ ಕಾಮಗಾರಿಗಳು ಪ್ರಾರಂಭವಾಗಿದ್ದು, ಎಲ್ಲ ನಾಗರಿಕರೂ ಈ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕಾರ ಕೊಡಬೇಕು, ಸಿ.ಸಿ ರಸ್ತೆ ಕಾಮಗಾರಿಯ ನಂತರ ನೀರಿನ ಪೈಪ್ ಹಾಕಲು ಹಾಗೂ ಇತರೇ ಕೆಲಸಗಳಿಗೆಂದು ಹಾಕಲಾದ ಸಿ.ಸಿ ರಸ್ತೆಗಳನ್ನು ಕೆಡೆಸದೆ ರಸ್ತೆ ಕಾಮಗಾರಿ ಮಾಡುವ ಮೊದಲೆ ಈ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಿ ಎಂದು ನಗರ ಶಾಸಕ ಬಸನಗೌಡ ರಾ ಪಾಟೀಲ್ ಯತ್ನಾಳ ಸಾರ್ವಜನಿಕರಿಗೆ ವಿನಂತಿಸಿದರು.
ಅವರು ನಗರದ ವಾರ್ಡ ನಂ 2ರ ದರ್ಗಾದಲ್ಲಿಯ ಆಂತರಿಕ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯಲ್ಲಿ ಮಂಜೂರಿಸಿದ ಒಟ್ಟು 24.00 ಲಕ್ಷ ರೂ ಮೊತ್ತದ ಒಳಚರಂಡಿ ಕಾಮಗಾರಿಗೆ ಹಾಗೂ ದಗಾದಲ್ಲಿ ಸಮಾಜ ಕಲ್ಯಾನ ಇಲಾಖೆಯ ಪ್ರಗತಿ ಕಾಲೋನಿ ಯೋಜನೆಯಡಿ ಮಂಜೂರಿಸಿದ ಒಟ್ಟು 60.00 ಲಕ್ಷ ರೂ ಮೊತ್ತದ ಸಿ.ಸಿ ರಸ್ತೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ನಗರದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಲ್ಲಿ ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದ್ದು, ಮಹಾನಗರ ಪಾಲಿಕೆಗೆ ಮಹಾತ್ಮಾ ಗಾಂಧೀ ನಗರ ವಿಕಾಸ ಯೋಜನೆ ಅಡಿಯಲ್ಲಿ 125 ಕೋಟಿ ರೂಪಾಯಿ ಬಿಡುಗಡೆಯಾಗುತ್ತಲಿದೆ ಎಂದರು.
ಸದರಿ ಮೊತ್ತದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಂತಿಗೆ ಹಣವನ್ನು ಭರಿಸಲು ಅವಕಾಶವಿದ್ದು ಆ ಪ್ರಕಾರವಾಗಿ 125 ಕೋಟಿ ರೂಪಾಯಿಗಳಲ್ಲಿ ಸುಮಾರು 8,09,76,000 ರೂಪಾಯಿಗಳನ್ನು ಕಾಯ್ದಿರಿಸಲಾಗಿದ್ದು ಸದರಿ ಮೊತ್ತವನ್ನು ಶೇ.30 ರಷ್ಟು ಅಂದರೆ 407 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಹಂಚಿಕೆ ಮಾಡುವದರಿಂದ ಪ್ರತಿಯೊಬ್ಬ ಫಲಾನುಭವಿಗೆ 1,98,958 ರೂಪಾಯಿ ಬರುತ್ತದೆ ಈ ರೀತಿಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 2,37,000 ರೂಪಾಯಿಯಲ್ಲಿ 1,98,958 ರೂ ಪಾಲಿಕೆಯಿಂದ ತುಂಬುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ಕೇವಲ 38,042 ರೂ ಗಳನ್ನು ಮಾತ್ರ ತುಂಬಿ ಪ್ರಧಾನಮಂತ್ರಿ ಆವಾಸ ಯೋಜನೆಯ ಮನೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಇದೇ ರೀತಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ವಂತಿಗೆ ಹಣವನ್ನು ಕಡಿಮೆ ಮಾಡಲು ಸಚಿವರ ಜೊತೆ ಚರ್ಚಿಸಲಾಗಿದ್ದು, ಸಾಮಾನ್ಯ ವರ್ಗದವರಿಗೂ ವಂತಿಗೆ ಹಣ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.
ಮನೆ ರಹಿತ ಬಡವರು ಇನ್ನೂ ಸಹ ಯಾರು ಅರ್ಜಿ ಸಲ್ಲಿಸಿಲ್ಲವೋ ನಮ್ಮ ಕಚೇರಿಗೆ ಬಂದು ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಿದ್ಧೇಶ್ವರ ಬ್ಯಾಂಕ್ ನಿರ್ದೇಶಕರಾದ ಸಾಯಿಬಣ್ಣ ಭೂವಿ, ನಗರಾಭಿವೃದ್ಧಿ ಪ್ರಾಧಿಕಾರದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ ಲಕ್ಷ್ಮಣ ಜಾಧವ್, ವಿಕ್ರಮ್ ಗಾಯಕವಾಡ, ಚಂದ್ರು ಚೌಧರಿ, ಬಸವರಾಜ ಗೊಳಸಂಗಿ, ಪ್ರಕಾಶ ಚವ್ಹಾಣ, ಪ್ರವೀಣ ಕಾಮಗೊಂಡ, ರಮೇಶ ಬಿರಾದಾರ, ರಾಹುಲ್ ಔರಂಗಬಾದ, ಶಿವಪ್ಪ ಗಂಟಿ, ವಿನಾಯಕ ಶಹಪೂರ, ಈರಣ್ಣ ವಾಡೇದ, ಪ್ರವೀಣ ವಂದಾಲಮಠ, ನಾಗರಾಜ ಮುಳವಾಡ, ರಾಜಶೇಖರ ಭಜಂತ್ರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು, ಕಾಲನಿಯ ಹಿರಿಯರು, ನಾಗರಿಕರು, ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು