ಸಿ.ವಿ. ರಾಮನ್ ಅವರ ಆತ್ಮಾಭಿಮಾನ ಮೈಗೂಡಿಸಿಕೊಳ್ಳಿ

ಮೈಸೂರು, ನ.7: ಸತ್ಯಮೇವ ಜಯತೆ ಸಂಘಟನೆ ವತಿಯಿಂದ ರಾಮವಿಲಾಸ್ ರಸ್ತೆಯಲ್ಲಿರುವ ಮರಿಮಲ್ಲಪ್ಪ ಶಾಲೆ ಮುಂಭಾಗ ಸರ್ ಸಿ ವಿ ರಾಮನ್ ಅವರ 132ನೇ ಜಯಂತಿಯ ಅಂಗವಾಗಿ ವಿಜ್ಞಾನಕ್ಕೆ ಸಿ.ವಿ.ರಾಮನ್ ಕೊಡುಗೆ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಂಚಾಲಕರಾದ ಪೆÇ್ರ. ಅನಂತರಾಮು ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪಾರಿತೋಷಕ ಗಳಿಸಿದ ಸಿ.ವಿ. ರಾಮನ್ ಅವರಲ್ಲಿದ್ದ ಆತ್ಮಾಭಿಮಾನ, ದೇಶಭಕ್ತಿ ಮೈಗೂಡಿಸಿಕೊಳ್ಳಿ ಎಂದು ಕರೆ ನೀಡಿದರು. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಮೈಗೂಡಿಸಿಕೊಂಡು ಚಿಂತನಾಶಕ್ತಿ, ಆಲೋಚನಾಶಕ್ತಿ ಬೆಳೆಸಿಕೊಂಡಾಗ ವಿದ್ಯಾಭ್ಯಾಸದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಏನಾದರೂ ಸಾಧಿಸಬಹುದು ಎಂದು ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ “ಸರ್ ಸಿ.ವಿ.ರಾಮನ್ ಅವರು ಬೆಳಕಿನ ಮಹತ್ವವನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಅಂದಿನ ಕಾಲದಲ್ಲಿ ಕಡು ಬಡ ಕುಟುಂಬ ವರ್ಗದಲ್ಲಿ ಜನಿಸಿ, ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಜೀವಮಾನ ಸಾಧನೆ ಮಾಡಿದ್ದಾರೆ. ಶಬ್ದ, ಬೆಳಕು, ಸ್ವರಗಳಿಗೆ ವಿಜ್ಞಾನ ಸೂತ್ರಗಳ ಮೂಲಕ ವಿನೂತನ ಆಯಾಮ ನೀಡಿದರು. ಭೌತ ವಿಜ್ಞಾನ ಕ್ಷೇತ್ರದಲ್ಲಿ ಅವರ ಸಂಶೋಧನೆಯಿಂದ ರಾಮನ್ ಎಫೆಕ್ಟ್ ಎಂದೇ ಜಗದ್ವಿಖ್ಯಾತಗೊಂಡದ್ದು ಭಾರತದ ಹಿರಿಮೆ ಎಂದು ಸ್ಮರಿಸಿದರು.
ಯುವ ಮುಖಂಡ ಎನ್.ಎಂ. ನವೀನ್ ಕುಮಾರ್ ಮಾತನಾಡಿ ಸರಕಾರಿ ಶಾಲೆಯೆಂದರೆ ಕೆಲವರು ನಿರ್ಲಕ್ಷ್ಯ ತೋರುತ್ತಾರೆ. ಆದರೆ ಭಾರತದಲ್ಲಿ ಸಾಧನೆ ಮಾಡಿದ ಅನೇಕರು ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರು. ಅದನ್ನು ವಿದ್ಯಾರ್ಥಿಗಳು ಸ್ಫೂರ್ತಿಯಾಗಿ ಸ್ವೀಕರಿಸಬೇಕು. ಸದ್ಯದ ಶಿಕ್ಷಣ ಪಠ್ಯಕ್ರಮಗಳಿಗೆ ಹೋಲಿಸಿದರೆ ಹಿಂದಿನ ಕಾಲದ ಪಠ್ಯಪುಸ್ತಕಗಳು ತುಂಬಾ ಕ್ಲಿಷ್ಟಕರವಾಗಿತ್ತು. ಅಂತಹ ಸಂದರ್ಭದಲ್ಲಿ ಯಾವುದೇ ಕಲಿಕಾ ಕೇಂದ್ರಗಳಿರಲಿಲ್ಲ. ಮಾರ್ಗದರ್ಶಕರು ವಿರಳವಾಗಿದ್ದರು. ಮಾಹಿತಿ ತಂತ್ರಜ್ಞಾನ ಸಂಪರ್ಕವಿರಲಿಲ್ಲ. ಸರ್ ಸಿ.ವಿ.ರಾಮನ್ ಅವರ ಕ್ರಿಯಾಶೀಲತೆ ವಿಜ್ಞಾನ ಕಾರ್ಯತಂತ್ರ ಇಂದಿನ ವಿದ್ಯಾರ್ಥಿಗಳ ಹೊಸ ಅನ್ವೇಷಣೆಗಳಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಜ್ಞಾನ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ ,ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ.ಕೆ.ಅಶೋಕ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ,ಉದ್ಯಮಿ ಅಪೂರ್ವ ಸುರೇಶ್ ,ಸತ್ಯಮೇವ ಜಯತೆ ಸಂಘಟನೆಯ ಅಧ್ಯಕ್ಷರಾದ ರಾಕೇಶ್ ಕುಂಚಿಟಿಗ ,ಎಸ್ ಎನ್ ರಾಜೇಶ್, ವಿನಯ್ ಕಣಗಾಲ್, ಸುಚೇಂದ್ರ ,ಕುಮಾರ್ ಗೌಡ ,ದೇವರಾಜ್, ರವಿ ಇನ್ನಿತರರು ಹಾಜರಿದ್ದರು.