ಸಿ.ಪಿ.ಶರತ್ ಚಂದ್ರ ಪರ ಪತ್ನಿ ಮತಯಾಚನೆ

ಚನ್ನಪಟ್ಟಣ, ಮೇ.೩- ಎಎಪಿ ಪಕ್ಷದ ಅಭ್ಯರ್ಥಿ ಸಿ.ಪಿ.ಶರತ್ ಚಂದ್ರ ಅವರ ಪತ್ನಿ ಡಿ.ಕೆ.ಮಂಜುಳಾ ಪತಿಯ ಪರವಾಗಿ ಕ್ಷೇತ್ರದಲ್ಲಿ ಎಎಪಿ ಕಾರ್ಯಕರ್ತರು ಜತೆ ಸದ್ದಿಲ್ಲದೆ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಮನೆ, ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
ಆಮ್ ಆದ್ಮಿ ಪಕ್ಷವು ತಾಲ್ಲೂಕಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಾವ ಶರತ್ ಚಂದ್ರ ಅವರ ಸ್ಪರ್ಧೆಯಿಂದಾಗ ವಿಶೇಷ ಗಮನ ಸೆಳೆದಿದೆ. ಶರತ್ ಚಂದ್ರ ಅವರ ಪತ್ನಿ, ಡಿ.ಕೆ.ಶಿವಕುಮಾರ್ ಅವರ ಸಹೋದರಿ ಡಿ.ಕೆ.ಮಂಜುಳಾ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಈ ವೇಳೆ ಮಾತನಾಡಿ ಡಿ.ಕೆ.ಮಂಜುಳಾ ಅವರು ತಮ್ಮ ಪತಿಯ ಪರ ಪ್ರತಿ ಹಳ್ಳಿಯ ಮನೆ ಮನೆಗೂ ಬೇಟಿ ನೀಡಿ ಮತಯಾಚನೆ ಮಾಡುತ್ತಿದ್ದು, ಜತೆಗೆ ಮಹಿಳಾ ಮತದಾರರನ್ನು ಸೆಳೆಯುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪರಕೀಯರ ಆಳ್ವಿಕೆಯಲ್ಲಿ ಭಾರತದ ಸಂಪತ್ತನ್ನು ಲೂಟಿ ಮಾಡಿದರು. ಅದೇ ಬಹಳ ದೊಡ್ಡ ಮಟ್ಟದ್ದು ಎಂದು ಭಾವಿಸಿದ್ದೇವು. ಆದರೆ, ಪ್ರಸ್ತುತ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಎಲ್ಲಾ ಸರ್ಕಾರಿ ಸ್ವಾಮ್ಯಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ದೇಶದ ಸಂಪತ್ತು ಸೇರಿಕೊಂಡು ಬಡ ಜನರು ಕಟ್ಟುತ್ತಿರುವ ತೆರಿಗೆ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇಂತಹ ಸರ್ಕಾರ ನಮಗೆ ಬೇಕಾ ಪ್ರಶ್ನಿಸಿದ ಅವರು, ಐದು ವರ್ಷಕ್ಕೊಮ್ಮೆ ಬದಲಾವಣೆಗಾಗಿ ಬರುವ ಈ ಚುನಾವಣೆಯನ್ನು ಬಳಸಿಕೊಂಡು ಜನರು ಮುಕ್ತ ಆಡಳಿತ ನಡೆಸಲು ಮುಂದಾಗಿರುವ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡಬೇಕು. ಅದರಲ್ಲೂ ಸರಳ ಸಜ್ಜನ ಮೂರ್ತಿಯಾದ ಸಿ.ಪಿ.ಶರತ್ ಚಂದ್ರ ಅವರು ಜನಸೇವೆ ಮಾಡಲು ಕಟಿಬದ್ಧರಾಗಿದ್ದು ಅವರಿಗೂ ಒಂದು ಅವಕಾಶ ನೀಡಿ ಎಂದು ಮತಯಾಚನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಎಎಪಿ ತಾಲ್ಲೂಕು ಅಧ್ಯಕ್ಷ ಎಸ್. ಆರ್.ನಾಗರಾಜು, ಮುಖಂಡರಾದ ಚಕ್ಕೆರೆ ಧರ್ಮೀಶ್ ಚಂದ್ರ, ಇಗ್ಗಲೂರು ಲೋಕೇಶ್, ಹಾಗೂ ಅನೇಕರು ಈ ವೇಳೆ ಹಾಜರಿದ್ದರು.