ಸಿಡಿ ರಾದ್ಧಾಂತ ನಡೆಯದ ಕಲಾಪ

ಬೆಂಗಳೂರು, ಮಾ. ೨೩- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣದ ಬಗ್ಗೆ ಹೈಕೋರ್ಟಿನ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಮೊಕದ್ದಮೆ ದಾಖಲಿಸಬೇಕು ಮತ್ತು ತೇಜೋವಧೆ ವರದಿಗಳನ್ನು ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆ ತಂದಿರುವ ಆರು ಸಚಿವರುಗಳು ರಾಜೀನಾಮೆ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿಧಾನಸಭೆಯಲ್ಲಿ ನಿನ್ನೆಯಿಂದ ಧರಣಿ ನಡೆಸಿರುವ ಕಾಂಗ್ರೆಸ್ ಸದಸ್ಯರು ಇಂದೂ ಧರಣಿ ಮುಂದುವರೆಸಿದ್ದರಿಂದ ಗದ್ದಲ, ಕೋಲಾಹಲದ ವಾತಾವರಣ ನಿರ್ಮಾಣವಾಗಿ ವಿಧಾನಸಭೆಯ ಕಲಾಪವನ್ನು ೨ ಬಾರಿ ಮುಂದೂಡಲಾಯಿತು.
ಇಂದು ಬೆಳಿಗ್ಗೆ ಸದನ ಪ್ರಾರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದರಿಂದ ಗೊಂದಲ ವಾತಾವರಣ ನಿರ್ಮಾಣವಾಯಿತು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಲಾಪ ನಡೆಸಲು ಸಹಕರಿಸುವಂತೆ ಮಾಡಿದ ಮನವಿಗೆ ಧರಣಿ ನಿರತ ಸದಸ್ಯರು ಕಿವಿಗೊಡಲಿಲ್ಲ. ಈ ವೇಳೆ ಸದನ ಮುಂದೂಡಿದ ಸಭಾಧ್ಯಕ್ಷರು ತಮ್ಮ ಕೊಠಡಿಯಲ್ಲಿ ಸದನದ ಪ್ರಮುಖ ನಾಯಕರ ಸಂಧಾನ ಸಭೆ ನಡೆಸಿ ಬಿಕ್ಕಟ್ಟು ಪರಿಹರಿಸಲು ಯತ್ನಿಸಿದ್ದು ಫಲಿಸಲಿಲ್ಲ.
ಮತ್ತೆ ಸದನ ಸಮಾವೇಶಗೊಂಡಾಗಲೂ ಕಾಂಗ್ರೆಸ್ ಸದಸ್ಯರ ಧರಣಿ, ಘೋಷಣೆ ಮುಂದುವರೆದು ಸದನದಲ್ಲಿ ಬೇರೆ ಕಲಾಪಗಳು ನಡೆಯದಂತಹ ಪರಿಸ್ಥಿತಿ ರೂಪುಗೊಂಡಿದ್ದರಿಂದ ಸಭಾಧ್ಯಕ್ಷರು ಸದನವನ್ನು ಮತ್ತೆ ಮುಂದೂಡಿದರು.
ಧರಣಿ ನಿರತ ಕಾಂಗ್ರೆಸ್ ಸದಸ್ಯರು ಖಾಲಿ ಸಿಡಿಗಳನ್ನು ಪ್ರದರ್ಶಿಸಿದ್ದಲ್ಲದೆ, ಇದು ಸಿಡಿ ಸರ್ಕಾರ ಎಂಬ ಘೋಷಣೆಗಳನ್ನು ಕೂಗಿದರು.
ಇಂದು ಸದನ ಆರಂಭವಾಗಿ ಮಾಜಿ ಸಚಿವ ಬಿ.ಡಿ. ಬಸವರಾಜು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಲಾಪ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ನಿನ್ನೆಯಿಂದ ಆರಂಭಿಸಿದ್ದ ಧರಣಿಯನ್ನು ಇಂದೂ ಮುಂದುವರೆಸಿದರು.
ಈಗ ಪ್ರಶ್ನೋತ್ತರವಿದೆ. ಪ್ರಶ್ನೋತ್ತರ ಅತ್ಯಂತ ಪ್ರಮುಖವಾದದ್ದು. ಧರಣಿ ಕೈಬಿಡಿ, ಪ್ರಶ್ನೋತ್ತರಕ್ಕೆ ಸಹಕರಿಸಿ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರಾದರೂ ಅದಕ್ಕೆ ಒಪ್ಪದ ಕಾಂಗ್ರೆಸ್ ಸದಸ್ಯರು ನ್ಯಾಯಾಂಗ ತನಿಖೆ, ಅತ್ಯಾಚಾರ ಪ್ರಕರಣ ದಾಖಲು ಹಾಗೂ ಆರು ಸಚಿವರು ರಾಜೀನಾಮೆ ನೀಡುವವರೆಗೂ ತಮ್ಮ ಹೋರಾಟ ನಿಲ್ಲದು ಎಂದು ಹೇಳಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಮುಂದುವರೆಸಿದರು.
ಈ ಗದ್ದಲದ ನಡುವೆಯೇ ಮಾತನಾಡಿದ ಬಿಜೆಪಿಯ ಅರಗ ಜ್ಞಾನೇಂದ್ರ, ಕಾಂಗ್ರೆಸ್‌ನವರನ್ನು ರಾಜ್ಯದಲ್ಲಿ ಜನ ಬಾವಿಗೆ ತಳ್ಳಿದ್ದಾರೆ. ಸದನದಲ್ಲೂ ಇವರು ಬಾವಿಗೆ ಬಿದ್ದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಘೋಷಣೆಗಳನ್ನು ಕೂಗುತ್ತಿದ್ದ ಕಾಂಗ್ರೆಸ್ ಸದಸ್ಯರಿಗೆ ಪ್ರಶ್ನೋತ್ತರ ನಡೆಸಲು ಅವಕಾಶ ಕೊಡಿ ಎಂದು ಹಲವು ಬಾರಿ ಮನವಿ ಮಾಡಿ, ಹೀಗೆ ಸದನದಲ್ಲಿ ಸಿಡಿಗಳನ್ನು ಪ್ರದರ್ಶಿಸುವುದು ಸರಿಯಲ್ಲ. ಸದನಕ್ಕೆ ಸಿಡಿಗಳನ್ನು ತರಬಾರದು ಎಂದು ಗದ್ದಲದಲ್ಲೇ ಹೇಳಿದರಾದರೂ ಕಾಂಗ್ರೆಸ್ ಸದಸ್ಯರು ಯಾವುದಕ್ಕೂ ಕಿವಿಗೊಡದೆ ಧರಣಿ, ಘೋಷಣೆಗಳನ್ನು ಮುಂದುವರೆಸಿದರು.
ಸರ್ಕಾರದ ಪರವಾಗಿ ಮಾತನಾಡಿದ ಗೃಹ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ಸಿಡಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ನಿನ್ನೆಯೇ ಸರ್ಕಾರ ಸ್ಪಷ್ಟ ಉತ್ತರ ನೀಡಿದೆ. ಇನ್ನೇನು ನಾವು ಹೇಳುವುದು ಉಳಿದಿಲ್ಲ. ಕಾಂಗ್ರೆಸ್ ಸದಸ್ಯರು ಧರಣಿ ಕೈಬಿಡಬೇಕು, ಪ್ರಶ್ನೋತ್ತರಕ್ಕೆ ಸಹಕರಿಸಬೇಕು ಎಂದು ಹೇಳಿದರಾದರೂ, ಕಾಂಗ್ರೆಸ್ ಸದಸ್ಯರು ಅದಕ್ಕೆ ಸೊಪ್ಪು ಹಾಕದೆ ಘೋಷಣೆ ಕೂಗುವುದನ್ನು ಮತ್ತಷ್ಟು ಜೋರುಗೊಳಿಸಿ, ಸಿಡಿ ಸರ್ಕಾರಕ್ಕೆ ಧಿಕ್ಕಾರ, ಸಿಡಿ ಬಗ್ಗೆ ನ್ಯಾಯಾಂಗ ತನಿಖೆ ಆಗಲಿ, ಆರು ಸಚಿವರು ರಾಜೀನಾಮೆ ನೀಡಬೇಕು ಎಂದು ಏರು ದ್ವನಿಯಲ್ಲಿ ಘೋಷಣೆಗಳನ್ನು ಕೂಗುವುದನ್ನು ಮುಂದುವರೆಸಿದರು. ಇದರಿಂದ ಸದನದಲ್ಲಿ ಗದ್ದಲ ತಾರಕಕ್ಕೇರಿ ಸಭಾಧ್ಯಕ್ಷರು ಸದನವನ್ನು ೧೦ ನಿಮಿಷಗಳ ಕಾಲ ಮುಂದೂಡಿದರು.
ಮತ್ತೆ ಸಮಾವೇಶ: ಮುಂದೂಡಿಕೆ
ಸದನ ಮುಂದೂಡಿದ ನಂತರ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಕೊಠಡಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಿರಿಯ ಶಾಸಕರುಗಳನ್ನು ಕರೆದು ಸಂಧಾನ ಸಭೆ ನಡೆಸಿದರು. ಈ ಸಂಧಾನ ಸಭೆಯಲ್ಲೂ ಒಮ್ಮತ ಮೂಡಲಿಲ್ಲ. ಕಾಂಗ್ರೆಸ್ ತನ್ನ ಪಟ್ಟು ಸಡಿಸಲಿಲ್ಲ. ಸರ್ಕಾರ ಸಹ ಕಾಂಗ್ರೆಸ್ ಬೇಡಿಕೆಗೆ ಒಪ್ಪಲಿಲ್ಲ. ಸಂಧಾನ ಸಭೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.
ಮತ್ತೆ ಸದನ ಮಧ್ಯಾಹ್ನ ೧೨.೪೦ಕ್ಕೆ ಸಮಾವೇಶಗೊಂಡಿತು. ಸಭಾಧ್ಯಕ್ಷರು ಸಂಧಾನ ಸಭೆಯ ಮಾಹಿತಿಯನ್ನು ಸದನಕ್ಕೆ ನೀಡಿ ಧರಣಿ ಕೈಬಿಡಿ, ಸರ್ಕಾರ ನಿಯಮ-೬೯ರಡಿಯಲ್ಲಿ ಈ ಚರ್ಚೆಗೆ ಉತ್ತರ ಕೊಟ್ಟಿದೆ ಎಂದು ಹೇಳಿ, ಈ ಸದನ ಕೇವಲ ಪ್ರತಿಪಕ್ಷಕ್ಕೆ ಮಾತ್ರ ಸೇರಿದ್ದಲ್ಲ. ೨೨೪ ಸದಸ್ಯರಿಗೂ ಮಾತನಾಡುವ ಹಕ್ಕಿದೆ. ಅವರ ಕರ್ತವ್ಯಗಳನ್ನು ನೆರವೇರಿಸಲು ಅವಕಾಶ ಕೊಡಿ. ನಿಮ್ಮ ವಿರೋಧವಿದ್ದರೆ ಕಲಾಪ ಅಡ್ಡಿ ಮಾಡದೆ ಸದನದ ಹೊರಗಡೆ ಬೇರೆ ರೀತಿಯಲ್ಲಿ ಪ್ರತಿಭಟಿಸಿ. ಸದನ ಕಾರ್ಯಕಲಾಪಗಳಿಗೆ ಅಡ್ಡಿ ಮಾಡಬೇಡಿ ಎಂದು ಕೇಳಿಕೊಳ್ಳುವುದಾಗಿ ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನಿನ್ನೆ ಸ್ಪಷ್ಟ ಉತ್ತರ ನೀಡಿದೆ. ನಿಲುವು ಸ್ಪಷ್ಟವಿದೆ. ಎಸ್‌ಐಟಿ ತನಿಖೆ ನಡೆದಿದೆ. ಈ ರೀತಿ ಧರಣಿ ಮಾಡುವುದು ಸರಿಯಲ್ಲ. ಬಾವಿಯಲ್ಲಿರುವವರು ಗದ್ದಲ ಮಾಡದೆ ಸುಮ್ಮನೇ ಇರಬೇಕು. ಕಲಾಪ ನಡೆಸಲು ಅವಕಾಶ ನೀಡಬೇಕು ಎಂದು ಹೇಳಿದರು.
ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರಾದ ರೇಣುಕಾಚಾರ್ಯ ಸೇರಿದಂತೆ ಹಲವರು ಸಿ.ಡಿ. ತಯಾರಿಸಿರುವ ಕಾಂಗ್ರೆಸ್‌ಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಿದರು.
ಈ ಗದ್ದಲದ ನಡುವೆಯೇ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಮ್ಮ ಬೇಡಿಕೆಗಳು ನ್ಯಾಯುತವಾಗಿದೆ. ಎಸ್‌ಐಟಿ ತನಿಖೆ, ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನಡೆಯಬೇಕು. ಸಂತ್ರಸ್ತ ಹೆಣ್ಣು ಮಗಳಿಗೆ ರಕ್ಷಣೆ ಸಿಗಬೇಕು. ಅತ್ಯಾಚಾರ ಪ್ರಕರಣ ದಾಖಲಿಸಬೇಕು. ಸಿ.ಡಿ. ಇದೆ ಎಂಬ ಭೀತಿಯಿಂದ ತೇಜೋವಧೆ ವರದಿಗಳನ್ನು ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ೬ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಈ ಬೇಡಿಕೆ ಒಪ್ಪಿದರೆ ಧರಣಿ ಹಿಂಪಡೆದು ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿದರು.
ಎಲ್ಲಿ ಹೆಣ್ಣು ಮಕ್ಕಳನ್ನು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬುದು ನಮ್ಮ ಸಂಸ್ಕೃತಿ. ಹೆಣ್ಣುಮಗಳಿಗೆ ರಕ್ಷಣೆ ಕೊಡಿ, ನಮ್ಮ ಬೇಡಿಕೆ ಒಪ್ಪಿಕೊಳ್ಳಿ ಎಂದು ಆಗ್ರಹಿಸಿದರು.
ಸರ್ಕಾರ ಇದಕ್ಕೆ ಸ್ಪಂದಿಸಲಿಲ್ಲ. ಸದನದಲ್ಲಿ ಘೋಷಣೆ ಮತ್ತಷ್ಟು ತಾರಕಕ್ಕೇರಿತು. ಸಭಾಧ್ಯಕ್ಷರು ಸದನವನ್ನು ಮತ್ತೆ ಮಧ್ಯಾಹ್ನ ೩ ಗಂಟೆಗೆ ಮುಂದೂಡಿದರು.