ಸಿ.ಡಿ ಯುವತಿ ಪೋಷಕರು ನಡೆಸಿದ ಪತ್ರಿಕಾಗೋಷ್ಠಿ ಎಸ್‌ಐಟಿ ಪ್ರಾಯೋಜಿತ

ಮಂಗಳೂರು, ಮಾ.೨೯- ಬಿಜೆಪಿಯ ಮಾಜಿ ಸಚಿವ ರಮೇಶ್ ಜಾರಕಿಹೊಳಿಯ ಅಶ್ಲೀಲ ಸಿ.ಡಿಯಲ್ಲಿನ ಯುವತಿಯ ಪೋಷಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ಆರೋಪಗಳನ್ನು ಮಾಡಿ ನಡೆಸಿದ ಪತ್ರಿಕಾಗೋಷ್ಠಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಾಯೋಜಿತವಾದುದು ಎಂದು ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಭಾನುವಾರ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಿಥುನ್ ರೈ ಅವರು, ಇಡೀ ದೇಶವು ರಮೇಶ್ ಜಾರಕಿಹೊಳಿಯ ಪುರುಷತ್ವಕ್ಕೆ ಸಾಕ್ಷಿಯಾಗಿದೆ. ಸಿಡಿಯಲ್ಲಿ ರಮೇಶ್ ಜಾರಕಿಹೊಳಿ ಇರುವುದರ ಬಗ್ಗೆ ಜನರಿಗೆ ತಿಳಿದಿದೆ. ಜಾರಕಿಹೊಳಿ ಯಾರೆಂದು ಮಕ್ಕಳಿಗೂ ತಿಳಿದಿದೆ. ಈ ಸಂದರ್ಭದಲ್ಲಿ, ಯುವತಿಯ ಹೇಳಿಕೆ ಮುಖ್ಯವಾದುದು. ಉದ್ಯೋಗದ ಭರವಸೆ ನೀಡಿ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ತನ್ನ ವಕೀಲರ ಮೂಲಕ ದೂರು ನೀಡಿದ್ದರೂ, ಎಸ್‌ಐಟಿ ಅಧಿಕಾರಿಗಳು ಆರೋಪಿಯನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಸಂತ್ರಸ್ತೆ ತನ್ನ ಕುಟುಂಬ ಸದಸ್ಯರಿಗೆ ಪೊಲೀಸ್ ರಕ್ಷಣೆ ಕೋರಿದ್ದಾರೆ. ಸಾಕ್ಷ್ಯಗಳ ನಾಶದಲ್ಲಿ ಆರೋಪಿ ಭಾಗಿಯಾಗಿದ್ದಾನೆ” ಎಂದು ಮಿಥುನ್ ರೈ ಆರೋಪಿಸಿದರು. ಸಂತ್ರಸ್ತೆಯ ಕುಟುಂಬ ಸದಸ್ಯರು ನಡೆಸಿದ ಪತ್ರಿಕಾಗೋಷ್ಠಿಯನ್ನು ಎಸ್‌ಐಟಿ ಪ್ರಾಯೋಜಿಸಿತು. ಕುಟುಂಬ ಸದಸ್ಯರು ಇಲ್ಲಿಯವರೆಗೆ ಏಕೆ ಮೌನವಾಗಿದ್ದರು? ಕಳೆದ ೨೫ ದಿನಗಳಿಂದ ತಮ್ಮ ಹೇಳಿಕೆಯನ್ನು ದಾಖಲಿಸಲು ಅವರು ಎಸ್‌ಐಟಿಯ ಮುಂದೆ ಏಕೆ ಹಾಜರಾಗಲಿಲ್ಲ?” ಎಂದು ಪ್ರಶ್ನಿಸಿದರು. ಆರೋಪಿಗಳನ್ನು ಬಂಧಿಸುವ ಬದಲು, ಎಸ್‌ಐಟಿ ಅಧಿಕಾರಿಗಳು ಪ್ರಕರಣವನ್ನು ’ತಿರುಚಲು’ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, “ರಮೇಶ್ ಜಾರಕಿಹೊಳಿಯ ಇತಿಹಾಸ ಎಲ್ಲರಿಗೂ ತಿಳಿದಿದೆ. ಅವರು ಕಾಂಗ್ರೆಸ್‌ಗೆ ದ್ರೋಹ ಬಗೆದು ಬಿಜೆಪಿಗೆ ಸೇರಿದರು. ಇದು ಅವರ ಗಂಡಸುತನವನ್ನು ಸಾಬೀತುಪಡಿಸುತ್ತದೆ” ಎಂದು ಕಿಡಿಕಾರಿದರು. ಮಾರ್ಚ್ ೨೯ ರಿಂದ ಎಸ್‌ಐಟಿ ಆರೋಪಿತರನ್ನು ಬಂಧಿಸುವವರೆಗೆ ವೈಯಕ್ತಿಕವಾಗಿ ಬೆಂಗಳೂರಿನ ಎಸ್‌ಐಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇನೆ ಎಂದೂ ಮಿಥುನ್ ರೈ ಹೇಳಿದರು. ಎಸ್‌ಐಟಿಯ ಇಂತಹ ಕ್ರಮಗಳನ್ನು ಖಂಡಿಸುವುದೇ ಪ್ರತಿಭಟನೆ, ಮತ್ತು ಸಂತ್ರಸ್ತರಿಗೆ ನ್ಯಾಯ ದೊರೆಯುವವರೆಗೆ ಈ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದರು. ಜಾರಕಿಹೊಳಿ ಸರ್ಕಾರಕ್ಕೆ ಕಳಂಕ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಂತಹ ಶಾಸಕರು ಬೇಕೇ?” ಎಂದು ಕೇಳಿದರು. ಸಂತ್ರಸ್ತೆ ನ್ಯಾಯಾಲಯಕ್ಕೆ ಹಾಜರಾಗಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಬೇಕು” ಒತ್ತಾಯಿಸಿದರು. ಈ ವೇಳೆ ಪಕ್ಷದ ಹಲವು ನಾಯಕರು ಉಪಸ್ಥಿತರಿದ್ದರು.