ಸಿ.ಟಿ. ರವಿ ವಿರುದ್ಧ ಸಿದ್ಧು ಅಭಿಮಾನಿಗಳ ಪ್ರತಿಭಟನೆ

ತುಮಕೂರು, ಸೆ. ೧೭- ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ಖಂಡಿಸಿ ಜಿಲ್ಲೆಯ ಕುರುಬ ಸಂಘಟನೆಗಳ ಮುಖಂಡರು, ಸಿದ್ದರಾಮಯ್ಯ ಅಭಿಮಾನಿಗಳು, ಹಿಂದುಳಿದ ವರ್ಗಗಳ ಒಕ್ಕೂಟದವರು ನಗರದ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ಸಂವಿಧಾನತ್ಮಕ ಹುದ್ದೆಯಾದ ವಿಪಕ್ಷ ನಾಯಕ ಸ್ಥಾನದಲ್ಲಿರುವವರ ಬಗ್ಗೆ ಬೇಜವಾಬ್ದಾರಿಯಾಗಿ ಮಾತನಾಡಿರುವ ಸಿ.ಟಿ.ರವಿ ತಾವೂ ಸಂವಿಧಾನಬದ್ದವಾಗಿ ಪದಗ್ರಹಣ ಮಾಡಿದ ಶಾಸಕ ಎಂಬುದನ್ನು ಮರೆತಿದ್ದಾರೆ. ಸಿ.ಟಿ ರವಿ ಅವರ ಬಗ್ಗೆ ಲೂಟಿ ರವಿ ಅಂಥ ಸಿದ್ದರಾಮಯ್ಯ ಅವರಲ್ಲ. ರಾಜ್ಯದ ಜನತೆ ಮಾತಾಡುತ್ತಿದ್ದಾರೆ. ಅವರು ಮೊದಲು ಬಾರಿ ಶಾಸಕರಾದಾಗ ಘೋಷಿಸಿದ ಆಸ್ತಿಗೂ ಈಗಿನ ಆಸ್ತಿಗೂ ಲೆಕ್ಕ ಹಾಕಿದರೆ ಅವರ ಆಸ್ತಿ ಎಷ್ಟು ಹೆಚ್ಚಾಗಿದೆ ಎಂಬುದು ತಿಳಿಯುತ್ತದೆ. ಹಾಗಾಗಿ ಸಿದ್ದರಾಮಯ್ಯ ಅವರು ಹೇಳಿದಂತೆ ಅವರು ಲೂಟಿ ರವಿಯೇ ಅವರ ಪಕ್ಷದವರೇ ಆದ ಎಂಎಲ್ಸಿ ವಿಶ್ವನಾಥ್ ಸಿ.ಟಿ.ರವಿ ನಡೆಯನ್ನು ಖಂಡಿಸಿದ್ದು, ಇನ್ನಾದರೂ ಸಿ.ಟಿ.ರವಿ ತಮ್ಮ ಅವಹೇಳನಕಾರಿ ಮಾತಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಯುವ ಮುಖಂಡ ನಿಖೇತ್‌ರಾಜ್‌ಮೌರ್ಯ ಮಾತನಾಡಿ, ವಿಪಕ್ಷ ನಾಯಕರನ್ನು ಕಚ್ಚೆಹರುಕ ಎಂದು ಜರಿದಿರುವ ಸಿ.ಟಿ.ರವಿ ಅವರು ತಮ್ಮ ಆಡಳಿತ ಪಕ್ಷದ ಕಚ್ಚೆ ಹರುಕುತನದ ಬಗ್ಗೆ ಬಾಯ್ಬಿಡದೆ ಮೌನವಹಿಸಿರುವುದೇಕೆ? ಸಿಡಿಯ ಬಗ್ಗೆ ಸ್ಟೇ ತಂದಿರುವ ಬಿಜೆಪಿ ನಾಯಕರ ಬಗ್ಗೆ ಸಿ.ಟಿ.ರವಿ ಧೈರ್ಯವಿದ್ದರೆ ಮಾತನಾಡಲಿ. ಭ್ರಷ್ಟಾಚಾರ, ಆಡಳಿತ ವೈಫಲ್ಯ ಮುಚ್ಚಿಹಾಕಲು ಇಂತಹ ಅನೈತಿಕ ಪದ ಪ್ರಯೋಗ ಮಾಡಲಾಗುತ್ತಿದೆ. ಇದರ ವಿರುದ್ಧ ಸ್ವಯಂ ಪ್ರೇರಿತವಾಗಿ ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ಸೇರಿದ್ದು, ರವಿ ಈ ಬಗ್ಗೆ ಕ್ಷಮೆಯಾಚಿಸಬೇಕು. ಶಾಸಕ ಸ್ಥಾನದಲ್ಲಿ ಅವರನ್ನು ಬಿಜೆಪಿ ಮುಂದುವರಿಸಬಾರದು. ಇಲ್ಲವಾದಲ್ಲಿ ರಾಜಧಾನಿ ಬೆಂಗಳೂರಿಗೆ ಹಾಗೂ ಚಿಕ್ಕಮಗಳೂರಿಗೆ ಬೃಹತ್ ಯಾತ್ರೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಸಿ.ಟಿ.ರವಿ ಅವರು ಸಂಸ್ಕೃತಿ ಹೀನರಂತೆ ಮಾತನಾಡಿದ್ದಾರೆ. ಇದನ್ನು ಇಡೀ ಕುರುಬ ಸಮುದಾಯ ವ್ಯಾಪಕವಾಗಿ ಖಂಡಿಸಿ ಹಳ್ಳಿ ಹಳ್ಳಿಯಲ್ಲೂ ಪ್ರತಿಭಟನೆ ನಡೆಸಲಾಗುತ್ತದೆ. ಬಿಜೆಪಿ ಪಕ್ಷ ಮೊದಲು ಸಿ.ಟಿ.ರವಿ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಕೆಂಪರಾಜು ಮಾತನಾಡಿ,
೫ ವರ್ಷ ಮುಖ್ಯಮಂತ್ರಿಯಾಗಿ ಸಮರ್ಥ ಹಾಗೂ ಸರ್ವಜನರಿಗೂ ಅನುಕೂಲವಾಗುವಂತಹ ಪಾರದರ್ಶಕ ಆಡಳಿತ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಕೆಳಮಟ್ಟದ ಟೀಕೆ ಮಾಡಿರುವ ಸಿ.ಟಿ.ರವಿ ನಿಜಕ್ಕೂ ಅನಾಗಕರಿಕ. ಕೂಡಲೇ ಅವರನ್ನು ಶಾಸಕ ಸ್ಥಾನ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಎಂದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್ ಸಿ.ಟಿ.ರವಿ ಹೇಳಿಕೆ ಖಂಡಿಸಿ ಕುರುಬ ಸಮುದಾಯದ ಆಕ್ರೋಶದ ಕಟ್ಟೆ ಹೊಡೆಯುವ ಮೊದಲು ಸಿದ್ದರಾಮಯ್ಯ ಅವರ ಕ್ಷಮೆಯಾಚಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಸಮುದಾಯದ ಮುಖಂಡರಾದ ಎನ್.ಸಿ.ನಾಗರಾಜು, ಮೈಲಾರಪ್ಪ, ಮಹಾಲಿಂಗಯ್ಯ, ನರಸಿಂಹಯ್ಯ ಮತ್ತಿತರರು ಪಾಲ್ಗೊಂಡಿದ್ದರು.