ಸಿ.ಜೆ. ಯಿಂದ ತನಿಖೆಗೆ ಸಿದ್ದು ಆಗ್ರಹ

ಕಲ್ಬುರ್ಗಿ, ಮಾ. ೩೦- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯಿಂದ ಸತ್ಯ ಹೊರಬರಲ್ಲ. ರಾಜ್ಯದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಉಸ್ತುವಾರಿಯಲ್ಲೆ ತನಿಖೆ ನಡೆದರೆ ಸತ್ಯಾಂಶ ಹೊರ ಬರುತ್ತದೆ ಎಂದಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಿ.ಡಿ. ಯುವತಿ ಈಗ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ. ಏನಾಗುತ್ತದೋ ನೋಡೋಣ ಎಂದರು.
ಬಸವಕಲ್ಯಾಣ ಕ್ಷೇತ್ರಕ್ಕೆ ತೆರಳುವ ಮುನ್ನ ಕಲ್ಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ರೀತ್ಯಾ ತನಿಖೆಯಾಗಬೇಕು ಎಂದು ಹೇಳಿದ್ದೆ. ಅದರಂತೆ ಈಗ ತನಿಖೆ ನಡೆದಿದೆ. ಎಸ್‌ಐಟಿ ಬದಲು ನ್ಯಾಯಾಧೀಶರ ಉಸ್ತುವಾರಿಯಲ್ಲೆ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕಾರಿನ ಮೇಲೆ ಕಲ್ಲು ಎಸೆದಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಕೈಗೆ ತೆಗೆದುಕೊಳ್ಳಲು ಬರುವುದಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದರು.
ಸಿ.ಡಿ. ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೆಸರು ಪ್ರಸ್ತಾವವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ. ಶಿವಕುಮಾರ್ ಅವರೆ ಅದನ್ನು ಅಲ್ಲಗಳೆದಿದ್ದಾರೆ ಎಂದರು.
ಬಸವ ಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ. ಬಿಜೆಪಿಗೆ ಅನುಕೂಲವಾಗಲಿ ಎಂದು ಮುಸ್ಲಿಂ ಅಭ್ಯರ್ಥಿಗೆ ಜೆಡಿಎಸ್ ಟಿಕೆಟ್ ನೀಡಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದೇ ಇದ್ದಲ್ಲಿ ಸೋಂಕು ಹೆಚ್ಚಾಗಿ ಜನ ಅಪಾಯಕ್ಕೆ ಸಿಲುಕುವ ಆತಂಕವೂ ಇದೆ ಎಂದು ಅವರು ಹೇಳಿದರು.