ಸಿ.ಎ. ಕ್ಷೇತ್ರದಲ್ಲಿ ವಿಪುಲ ಅವಕಾಶ: ಸಾಗರ ಖಂಡ್ರೆ

(ಸಂಜೆವಾಣಿ ವಾರ್ತೆ)
ಭಾಲ್ಕಿ;ಸೆ.2: ಚಾರ್ಟೆಡ್ ಅಕೌಂಟೆಂಟ್ ಪರೀಕ್ಷಾ ತರಬೇತಿ ಪಡೆದು ಸಿ.ಎ. ಪರೀಕ್ಷೆ ಪಾಸಾದರೆ ಪ್ರತಿಷ್ಠಿತ ಕಂಪನಿಗಳಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ ಎಂದು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಾಗರ ಖಂಡ್ರೆ ಹೇಳಿದರು.
ಇಲ್ಲಿಯ ಬಿಕೆಐಟಿ ಕಾಲೇಜಿನಲ್ಲಿ ಚನ್ನಬಸವೇಶ್ವರ ಪದವಿ ಕಾಲೇಜಿನ ವಾಣಿಜ್ಯ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಿ.ಎ.ಆಗುವುದು ಹೇಗೆ? ಎಂಬ ವಿಷಯ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಕೇವಲ ವಿಜ್ಞಾನ, ಸಿ.ಇ.ಟಿ. ನೀಟ್ ಎಂಜಿನಿಯರಿಂಗ್ ಕೋರ್ಸ್‍ಗಳಿಂದ ಮಾತ್ರ ಉನ್ನತ ಉದ್ಯೋಗಗಳು ದೊರೆಯುತ್ತವೆ ಎಂಬುದು ತಪ್ಪು ಗ್ರಹಿಕೆ. ವಾಣಿಜ್ಯ ಕೋರ್ಸ್ ಆಯ್ಕೆ ಮಾಡಿಕೊಂಡು ಸಿ.ಎ. ಪಾಸಾದರೆ ರಾಜ್ಯ, ರಾಷ್ಟ್ರ ಸೇರಿದಂತೆ ವಿದೇಶಗಳಲ್ಲಿಯೂ ಉತ್ತಮ ಉದ್ಯೋಗ ಅವಕಾಶಗಳಿವೆ. ಸಿ.ಎ.ಕೋರ್ಸ್ ಬಹಳಷ್ಟು ಕಷ್ಟ. ಆದರೆ ಶ್ರದ್ಧೆಯಿಂದ ಓದಿದರೆ ಸುಲಭವಾಗಿ ಪಾಸಾಗಬಹುದು. ಪ್ರಯತ್ನವಿಲ್ಲದೆ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ’ ಎಂದು ನುಡಿದರು.
‘ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸಿ.ಎ. ಕುರಿತು ಅರಿವು ಮೂಡಿಸುವುದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ?10 ಸಾವಿರ ಶುಲ್ಕದಲ್ಲಿ ಹತ್ತು ತಿಂಗಳು ತರಬೇತಿ ನೀಡಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಹೈದರಾಬಾದಿನ ರೂಪಾ ಕಾಮತ್, ಸುಮಿತ್ ಭಾರಡಿಯಾ, ಸಂಗಶೆಟ್ಟಿ ಶೆಟ್ಕಾರ್ ಅವರು ಚಾರ್ಟೆಡ್ ಅಕೌಂಟೆಂಟ್ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಆಡಳಿತಾಧಿಕಾರಿ ಅಂಕುಶ ಢೋಲೆ, ಎಚ್.ಆರ್. ವ್ಯವಸ್ಥಾಪಕ ಗುರುನಾಥ ಕುಡ್ತೆ, ಪ್ರಾಚಾರ್ಯ ಎಸ್.ಸಿ. ಪಾಟೀಲ, ರಮೇಶ ಪಾಟೀಲ, ವೈಭವಿ ಪಾಟೀಲ, ಉಷಾ ರಾಠೋಡ್, ಅನಿಲ್‍ಕುಮಾರ ಡಿಗ್ಗೆ ಇದ್ದರು.