ಸಿ ಎಂ ರಾಜೀನಾಮೆಗೆ ಡಿಕೆಶಿ ಆಗ್ರಹ

ಬೆಂಗಳೂರು, ಏ. ೧- ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪುಟ ದರ್ಜೆ ಸಚಿವರೊಬ್ಬರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ದೂರು ನೀಡಿ ೧೨೦೦ ಕೋಟಿ ರೂ. ಹಗರಣದ ಆರೋಪ ಮಾಡಿರುವಾಗ ತಿಪ್ಪೆಸಾರಿಸುವುದು ಬಿಟ್ಟು, ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಲಿ ಇಲ್ಲವೆ ಸಂಜೆಯೊಳಗೆ ಸಚಿವ ಈಶ್ವರಪ್ಪನವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
೧೨೦೦ ಕೋಟಿ ರೂ. ಭ್ರಷ್ಟಾಚಾರದ ಕೂಪ ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟ ನಡೆಸುತ್ತದೆ. ಈಶ್ವರಪ್ಪ ಹೇಳಿದ್ದು ತಪ್ಪು ಎಂದು ನಾನು ಹೇಳಲ್ಲ. ಈಶ್ವರಪ್ಪ ಅವರ ಕರ್ತವ್ಯ ಮಾಡಿದ್ದಾರೆ ಎಂದರು.
ಬಿಜೆಪಿ ಸರ್ಕಾರ ಶೇ. ೩೦ ಪರ್ಸೆಂಟ್ ಸರ್ಕಾರ. ಈ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ನಿರಂತರ ಎಂದರು.
ಸಚಿವ ಈಶ್ವರಪ್ಪ ಹಿರಿಯರು. ಉಪಮುಖ್ಯಮಂತ್ರಿಯಾಗಿದ್ದವರು. ಬಿಜೆಪಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಅವರು ಗಂಭೀರ ಆರೋಪ ಮಾಡಿರುವಾಗ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಬೇಕು,ಇಲ್ಲ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಅದು ಬಿಟ್ಟು ಬೇರೆ ದಾರಿ ಇಲ್ಲ ಎಂದರು.
ಸಚಿವ ಈಶ್ವರಪ್ಪ ಅವರಿಗೆ ಸಾಕಷ್ಟು ಅನುಭವವಿದೆ. ಜ್ಞಾನವೂ ಇದೆ. ಹಾಗಾಗಿ ಅವರು ಏನೋ ಸುಮ್ಮನೆ ದೂರು ನೀಡಿಲ್ಲ. ಮುಖ್ಯಮಂತ್ರಿಗಳಿಗೆ ಯಾವ ಅಧಿಕಾರ ಇದೆ, ಮಂತ್ರಿಗಳಿಗೆ ಯಾವ ಅಧಿಕಾರ ಇದೆ. ನಿಯಮಗಳು, ಕಾನೂನು ಎಲ್ಲವನ್ನು ಉಲ್ಲೇಖಿಸಿಯೇ ದೂರು ನೀಡಿದ್ದಾರೆ .ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಸಚಿವ ಈಶ್ವರಪ್ಪನವರ ದೂರು ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ ಎಂಬುದಕ್ಕೆ ಸಾಕ್ಷಿ. ಬಿಜೆಪಿಯಲ್ಲೂ ಭಿನ್ನಮತ ಭುಗಿಲೆದ್ದಿದೆ. ಅದು ಅವರ ಆಂತರಿಕ ವಿಚಾರ. ಆದರೆ ಆಡಳಿತ ಕುಸಿದಿರುವುದಂತೂ ನಿಜ ಎಂದರು.
ಅಸಂಬದ್ಧ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ವಿಚಾರ ಅಸಂಬದ್ಧ. ಆ ಬಗ್ಗೆ ನಾನು ಮಾತನಾಡಲ್ಲ. ನನ್ನ ಹೆಸರು ಹೇಳಿದರೆ ಅವರಿಗೆ ಮಾರ್ಕೆಟಿಂಗ್ ಆಗುತ್ತೆ. ಅದಕ್ಕೆ ನನ್ನ ಹೆಸರು ಸೇರಿಸುವ ಪ್ರಯತ್ನ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.