ಸಿ.ಎಂ. ರಾಜಕೀಯ ಕಾರ್ಯದರ್ಶಿಯಾಗಿ ಜೀವರಾಜ್

ಬೆಂಗಳೂರು,ಡಿ. ೧೮- ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಮಾಜಿ ಸಚಿವ ಡಿ.ಎನ್. ಜೀವರಾಜ್ ಅವರನ್ನು ನೇಮಕ ಮಾಡಲಾಗಿದೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಶಾಸಕ ಎಸ್.ಆರ್. ವಿಶ್ವನಾಥ್ ರಾಜೀನಾಮೆ ನೀಡಿ ಬಿಡಿಎ ಅಧ್ಯಕ್ಷರಾಗಿ ಕಾರ್ಯಾಭಾರ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ಡಿ.ಎನ್. ಜೀವರಾಜ್ ಅವರನ್ನು ನೇಮಕ ಮಾಡುವ ಸಂಬಂಧ ಮುಖ್ಯಮಂತ್ರಿಗಳು ನಿನ್ನೆ ರಾತ್ರಿ ಟಿಪ್ಪಣಿ ಕಳುಹಿಸಿದ್ದು ಇಂದು ಅಧಿಕೃತ ಆದೇಶ ಹೊರಬೀಳಲಿದೆ.
ಚಿಕ್ಕಮಗಳೂರಿನ ಶೃಂಗೇರಿ ವಿಧಾನಸಭೆಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಡಿ.ಎನ್. ಜೀವರಾಜ್ ಕಳೆದ ಬಿಜೆಪಿ ಸರ್ಕಾರದಲ್ಲಿ ಆಹಾರ ಸಚಿವರಾಗಿ ಕೆಲಸ ಮಾಡಿದ್ದರು.
೨೦೧೮ರ ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದರು. ಈಗ ಇವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನಿಯುಕ್ತಿ ಮಾಡಲಾಗಿದ್ದು, ಈ ಹುದ್ದೆ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿದೆ.