ಸಿ.ಎಂ. ಭರವಸೆಯಿಂದ ಧರಣಿ ಹಿಂದಕ್ಕೆ

ಗಂಗಾವತಿ ಏ.01: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆರು ತಿಂಗಳೊಳಗೆ ನಮ್ಮ ಸಮುದಾಯಕ್ಕೆ ಮೀಸಲಾತಿ ಒದಗಿಸಿ ಕೊಡುವ ಭರವಸೆ ನೀಡಿದ ಹಿನ್ನೆಲೆ ನಾವು ನಮ್ಮ ಧರಣಿ ಸತ್ಯಾಗ್ರಹವನ್ನು ಹಿಂಪಡೆದಿದ್ದೇವೆ ಎಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಎಪಿಎಂಸಿ ಮಾರುಕಟ್ಟೆಯ ಮಾರಾಟ ಮಳಿಗೆಯ ಭವನದಲ್ಲಿ ಗಂಗಾವತಿ ತಾಲ್ಲೂಕು ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.
ಇಡೀ ದೇಶದಲ್ಲಿ ಯಾವುದೇ ಒಂದು ಸಮುದಾಯ ಇಷ್ಟೊಂದು ಯಶಸ್ವಿಯಾಗಿ ಪಾದಯಾತ್ರೆಯ ಮೂಲಕ ಸಮಾಜದ ಮಕ್ಕಳ ಶೈಕ್ಷಣಿಕ ಮೀಸಲಾತಿಗೆ ಚಳುವಳಿ ನಡೆಸಿದೆ ಎಂದರೇ ಅದು ನಮ್ಮ ಪಂಚಮಸಾಲಿ ಸಮಾಜ ಮಾತ್ರ. ಇಡೀ ಭಾರತದಲ್ಲೇ ಬೃಹತ್ 712 ಕಿ.ಮೀ ಪಾದಯಾತ್ರೆಯನ್ನು 39 ದಿನಗಳಲ್ಲಿ ಕ್ರಮಿಸಿ ದೊಡ್ಡ ಕಾಂತ್ರಿಯನ್ನು ಉಂಟು ಮಾಡಿದ್ದೇವೆ. ನಮ್ಮ ಈ ಪಾದಯಾತ್ರೆಗೆ ದೊಡ್ಡ ಶಕ್ತಿಯನ್ನು ಕೊಪ್ಪಳದ ಸಮಾಜ ಬಾಂಧವರು ತುಂಬಿದ್ದಾರೆ. ಆ ಹಿನ್ನೆಲೆಯಲ್ಲಿ ಅವರಿಗೆಲ್ಲ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ನಾವು ಈ ಶರಣು ಶರಣಾರ್ಥಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಮ್ಮ ಸಮುದಾಯಕ್ಕೆ 2ಎ ಮೀಸಲಾತಿಗಾಗಿ 39 ದಿನಗಳ ಕಾಲ ಬೃಹತ್ ಪಾದಯಾತ್ರೆ ಹಾಗೂ 23 ದಿನಗಳ ಕಾಲ ಧರಣಿ ಸತ್ಯಾಗ್ರಹವನ್ನು ಶ್ರೀಗಳ ನೇತೃತ್ವದಲ್ಲಿ ನಡೆಸಿ ದೊಡ್ಡ ಇತಿಹಾಸವನ್ನು ನಿರ್ಮಿಸಿದ್ದೇವೆ. ಕಳೆದ 27 ವರ್ಷಗಳಿಂದ ನಮ್ಮ ಸಮಾಜದ ಹಿರಿಯರು ಮೀಸಲಾತಿಗಾಗಿ ಹೋರಾಟವನ್ನು ನಡೆಸಿಕೊಂಡು ಬಂದಿದ್ದಾರೆ. ಅಲ್ಲದೇ, ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಕಷ್ಟು ಜನ ಮುಂದಾಗಿದ್ರು. ಆದರೇ, ಅವರ ಯೋಜನೆಗಳು ನಮ್ಮ ಒಗ್ಗಟ್ಟಿನ ಮುಂದೆ ಕೈಗೊಡಲಿಲ್ಲ. ಮುಖ್ಯಮಂತ್ರಿಗಳು ಆರು ತಿಂಗಳು ಗಡುವು ನೀಡಿದ್ದಾರೆ. ಅವರ ಮಾತಿಗೆ ಬೆಲೆಕೊಟ್ಟು ಇಂದು ನಾವು ನಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿದ್ದೇವೆ. ಆದರೇ, ಹೋರಾಟ ಇನ್ನು, ಮುಗಿದಿಲ್ಲ. ಸೆ.15 ಕ್ಕೆ ಸರ್ಕಾರದ ಆರು ತಿಂಗಳ ಗಡುವು ಮುಗಿಯಲಿದೆ. ಒಂದು ವೇಳೆ ಸೆ.15 ರೊಳಗೆ ಮೀಸಲಾತಿ ಘೋಷಣೆ ಮಾಡದೇ ಹೋದ್ರೆ, ಮತ್ತೆ ಹೋರಾಟವನ್ನು ಮಾಡಲಾಗುವುದು. ಈ ಬಾರಿ 20 ಲಕ್ಷ ಪಂಚಮಸಾಲಿಗಳು ಸೇರುವ ಮೂಲಕ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದರು.
ಮಾಜಿ ಸಂಸದ ಶಿವರಾಮಗೌಡ, ಸಮಾಜದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಭೂತೆ ಮಾತನಾಡಿದರು.
ಈ ವೇಳೆ ಸಮಾಜದ ಪ್ರಮುಖರಾದ ಬಸವರಾಜ ರಾಮತ್ನಾಳ, ಚನ್ನಬಸಪ್ಪ ಕೋರಿ, ಕಳಕನಗೌಡ, ಸಾಗರ್ ಮುನವಳ್ಳಿ, ಡಾ.ಬಸವನಗೌಡ ಪಾಟೀಲ್, ಪ್ರಭುರಾಜಗೌಡ ಪಾಟೀಲ್, ನಿರಂಜನ, ಶಿವಕುಮಾರ್ ಮೇಟಿ, ಶಿವಾನಂದ, ಕೋಟ್ರಪ್ಪ, ನಿಂಗೋಜಿ, ದೇಸಾಯಿ, ಮಲ್ಲಿಕಾರ್ಜುನ ಗಡಾದ, ವಿರೇಶ್ ಸುಳೆಕಲ್, ಎ.ಕೆ.ಮಹೇಶಕುಮಾರ್, ಜಂಬಣ್ಣ ತಾಳೂರು ಸೇರಿದಂತೆ ವಿವಿಧ ಗ್ರಾಮಗಳ ಸಮಾಜದ ಮುಖಂಡರು ಇದ್ದರು