ಸಿ.ಎಂ. ಬದಲಾವಣೆ ಕೈ ನಾಯಕರ ಕಟ್ಟುಕಥೆ

ಮೈಸೂರು,ನ. ೯- ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಸಿಎಂ ಬದಲಾಗಲಿದ್ದಾರೆ ಎಂಬುದು ಕಾಂಗ್ರೆಸ್ ನಾಯಕರ ಕಟ್ಟುಕಥೆ ಎಂದು ಹೇಳಿದ್ದಾರೆ.

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಅವರ ಖುರ್ಚಿಯನ್ನು ಉಳಿಸಿಕೊಂಡರೆ ಸಾಕು. ಹಾಗಾಗಿ ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆಯೇ ಪರಸ್ಪರ ಉತ್ತಮ ಬಾಂಧವ್ಯ ಇಲ್ಲ. ಒಬ್ಬರಿಗೊಬ್ಬರು ಅಧಿಕಾರವನ್ನು ಕಿತ್ತುಕೊಳ್ಳಲು ಬಡಿದಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಸರಿ ಪಡಿಸಿಕೊಳ್ಳಲಿ:
ಕಾಂಗ್ರೆಸ್ ಪಕ್ಷದ ನಾಯಕರು ಮೊದಲು ಅವರ ನಡುವಿನ ಗೊಂದಲ ಬಗೆಹರಿಸಿಕೊಳ್ಳಲಿ ಎಂದು ಅವರು ಹೇಳಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಯತ್ನ ಪಡುತ್ತಿದ್ದರೆ, ಶಿವಕುಮಾರ್ ಅವರನ್ನು ಕೆಳಗಿಳಿಸಲು ಸಿದ್ದರಾಮಯ್ಯ ಅವರು ಶತಪ್ರಯತ್ನ ನಡೆಸಿದ್ದಾರೆ ಎಂದು ದೂರಿದ್ದಾರೆ

ಇದನ್ನು ಮುಚ್ಚಿಕೊಳ್ಳಲು ಇವರಿಬ್ಬರೂ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದರು
ರಾಜರಾಜೇಶ್ವರಿ ನಗರ , ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನೂರಕ್ಕೆ ನೂರು ಸ್ಪಷ್ಟ. ಮುನಿರತ್ನ ಅವರ ಪರ ಅಲೆ ಇರುವುದು ನಮಗೆ ಪ್ರಚಾರ ಸಂದರ್ಭದಲ್ಲಿಯೇ ಗೊತ್ತಾಗಿದೆ. ಶೇ.೫೦ರಷ್ಟು ಮಂದಿ ಅವರ ಅಭಿವೃದ್ಧಿ ನೋಡಿ ಮತ ನೀಡಿದರೆ, ಇನ್ನು ಶೇ.೫೦ ಮಂದಿ ಬಿಜೆಪಿ ಪಕ್ಷಕ್ಕಾಗಿ ಮತ ಚಲಾಯಿಸಿದ್ದಾರೆ. ಅಲ್ಲದೆ, ಎರಡೂ ಕಡೆ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆ ಸೇರಿದಂತೆ ನಾಲ್ಕು ವಿಧಾನಪರಿಷತ್ ಸ್ಥಾನಗಳಲ್ಲೂ ಕಾಂಗ್ರೆಸ್ ಸೋಲಬೇಕೆಂಬುದು ಅವರ ಪಕ್ಷಗಳ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣ ಕಾಯುತ್ತಿದೆ. ಕಾರಣ, ಸೋತ ಮೇಲೆ ಪರಸ್ಪರ ಒಬ್ಬರ ಮೇಲೊಬ್ಬರು ಸೋಲಿಗೆ ಕಾರಣೀಭೂತರು ಎಂದು ಆರೋಪಿಸಿ ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ಅವರ ಪಕ್ಷದಲ್ಲಿಯೇ ನಡೆಯುತ್ತಿದೆ ಎಂದು ಅವರು ಹೇಳಿದರು.