ಸಿ.ಆರ್.ಪಿ. ಬಿಆರ್‌ಸಿ, ಬಿಇಓ,ಡಿಡಿಪಿಐ ವಿರುದ್ದ ತನಿಖೆಯಾಗಲಿ

ರಾಯಚೂರು,ಜ.೧೨- ತಾಲೂಕಿನ ತಡಕಲ್ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ೨೪.೧೨.೨೦೨೦ ರಿಂದ ಮುಖ್ಯಗುರುಗಳಿಲ್ಲದೆ ನಡೆಸಿಕೊಂಡು ಬರುತ್ತಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಡೆ ಸಂಶಯಾಸ್ಪದವಾಗಿದ್ದು ಸಿ.ಆರ್.ಪಿ. ಬಿಆರ್‌ಸಿ, ಬಿಇಓ, ಡಿಡಿಪಿಐ ಅವರ ವಿರುದ್ದ ಆಯುಕ್ತರ ಮಟ್ಟದಲ್ಲಿ ತನಿಖೆಯಾಗಬೇಕೆಂದು ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಜ್ಯೋತಿರ್ಲಿಂಗ ಗೌಡ ತಡಕಲ್ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,೨೪ನೇ ಡಿಸೆಂಬರ್ ೨೦೨೦ ರಿಂದ ಶಾಲೆಗೆ ಮುಖ್ಯಗುರುಗಳಿಲ್ಲದಿರುವುದು ಸ್ಥಗಿತವಾಗಿರುವ ಶೈಕ್ಷಣಿಕ ಚಟುವಟಿಕೆಗಳು, ಶಿಕ್ಷಣದ ಗುಟ್ಟಮಟ್ಟ ಹಾಗೂ ಶಾಲಾಅಭಿವೃದ್ಧೀ ಕುಂಠಿತವಾಗಿರುವ ಕುರಿತು ಶಿಕ್ಷಣ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂದು ಆಪಾದಿಸಿದರು.
ಶಾಶ್ವತ ಮುಖ್ಯಗುರುಗಳನ್ನು ಒದಗಿಸಿ ಶಾಲಾ ಅನುದಾನ ಖಾತೆಯನ್ನು ಆಡಿಟ್ ಮಾಡಿ ನಮ್ಮ ಸಾರ್ವಜನಿಕ ದೇಣಿಗೆ ಹಾಗೂ ಸರ್ಕಾರದ ಅನುದಾನವನ್ನು ಶಾಲಾ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡಲು ಹಲವಾರು ಬಾರಿ ಮನವಿ ಸಲ್ಲಿಸಿದರೂ ಈ ವರೆಗೆ ಸ್ಪಂದಿಸಿಲ್ಲ. ಶಾಲಾ ಅನುದಾನವಿಲ್ಲದೆ ಹಲವಾರು ಸಹ ಶಿಕ್ಷಕರಿಗೆ ಪ್ರಭಾರಿ ಮುಖ್ಯಗುರುಗಳ ಜವಾಬ್ದಾರಿಯನ್ನು ನೀಡಿರುತ್ತಾರೆ. ಅದನ್ನು ನಿಬಾಯಿಸಲು ಆಗದೆ ಎಲ್ಲ ಸಹಶಿಕ್ಷಕರು ಆ ಹೊಣೆಯನ್ನು ನಿರಾಕರಿಸುತ್ತಾರೆ. ಇದಕ್ಕೆ ಮೇಲಾಧಿಕಾರಿಗಳು ಎಸ್‌ಡಿಎಂಸಿ ಸಹಕಾರ ನೀಡುತ್ತಿಲ್ಲ ಎಂದು ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿರುತ್ತಾರೆ. ಶಾಲಾ ಸುಧಾರಣೆ ಹಾಗೂ ಶಿಕ್ಷಕರ ರಕ್ಷಣೆಗೆ ಎಸ್‌ಡಿಎಂಸಿ ಸದಾ ಸಿದ್ದವಾಗಿದ್ದು ಶಿಕ್ಷಕರ ರಕ್ಷಣೆಗೆ ಉಚ್ಛ ನ್ಯಾಯಲಯದಲ್ಲಿ ಹೋರಾಟ ಮಾಡಿ ಶಿಕ್ಷಕರ ಮರು ನಿಯೋಜನೆ ಆದೇಶ ಮಾಡಿಸಿರುತ್ತದೆ. ಶಿಕ್ಷಕರ ರಕ್ಷಣೆ ಮಾಡಬೇಕಾದ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಂಡು ಶಿಕ್ಷಕರಿಗೆ ಕಿರುಕುಳ ನೀಡುವುದು, ಅಮಾನತ್ತಿನ ಬೆದರಿಕೆ ಹಾಕಿ ಕೆಲಸ ಮಾಡಲು ಒತ್ತಡ ಹೇರಿ ಆದೇಶ ಮಾಡುತ್ತಿದ್ದಾರೆ. ಎಸ್.ಡಿ.ಎಂ.ಸಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಶಿಕ್ಷಕರಲ್ಲಿ ಗುಂಪುಗಾರಿಕೆ ಮಾಡಿ ಎಸ್‌ಡಿಎಂಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಮೌಖಿಕ ಆದೇಶದ ಮೂಲಕ ನಿರ್ಣಯ ಪಾಲಿಸುವ ಅಗತ್ಯ ಇಲ್ಲ ಎಂದು ಹೇಳುವ ಮೂಲಕ ಎಸ್.ಡಿ.ಎಂ.ಸಿ ಹಾಗೂ ಶಿಕ್ಷಕರ ಮಧ್ಯದಲ್ಲಿ ಸಮನ್ವಯ ಹಾಳು ಮಾಡುತ್ತಿದ್ದಾರೆ. ಶಿಕ್ಷಕರಲ್ಲಿ ಹೊಂದಾಣಿಕೆ ಇಲ್ಲದಿರುವುದು ಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬೀರುತ್ತದೆ. ಎಸ್.ಡಿ.ಎಂ.ಸಿ ಅವಧಿ ಪೂರ್ಣಗೊಳಿಸಿದೆ. ಮುಖ್ಯಗುರುಗಳನ್ನು ನೇಮಕ ಮಾಡಿ ಎಸ್.ಡಿ.ಎಂ.ಸಿ ರಚನೆ ಮಾಡಿ ಸಾಕ್ಸ್ ಬೂಟು ಹಂಚಲು ಮನವಿ ಮಾಡಿಕೊಂಡರೂ ಇದೇ ತಿಂಗಳು ೪ ನೇ ತಾರೀಖಿನಂದು ಎಸ್.ಡಿ.ಎಂ.ಸಿ ಸದಸ್ಯರ ಹಾಗೂ ಪಾಲಕರ ಗಮನಕ್ಕೂ ತರದೆ ಬೂಟು ಹಂಚಿಕೆ ಮಾಡಿರುತ್ತಾರೆ. ಮಕ್ಕಳ ಶಿಕ್ಷಣಕ್ಕೆ ಇಲ್ಲದ ಆದ್ಯತೆ ಬೂಟು ಹಂಚಲು ಯಾಕೆ? ಇದು ಶಿಕ್ಷಣಾಧಿಕಾರಿಗಳ ಭ್ರಷ್ಟಾಚಾರ ಹಾಗೂ ಅಧಿಕಾರದ ದುರುಪಯೋಗವಾಗಿದ್ದು ನಮ್ಮ ಶಾಲೆಯ ಈ ದುರವಸ್ಥೆಗೆ ಕಾರಣರಾದ ಸಿ.ಆರ್.ಪಿ. ಬಿಆರ್‌ಸಿ, ಬಿಇಓ, ಡಿಡಿಪಿಐ ಅವರ ವಿರುದ್ದ ಆಯುಕ್ತರ ಮಟ್ಟದಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಲ್ಲು,ಅಮರಯ್ಯಸ್ವಾಮಿ,ಅಮರೇಶ ಇದ್ದರು.