ಸಿಹಿಕುಂಬಳಕಾಯಿಯ (ಸಿಹಿಗುಂಬಳ) ಉಪಯೋಗಗಳು

ಕುಂಬಳಕಾಯಿಯಲ್ಲಿ ಎರಡು ವಿಧಗಳಿವೆ. ಕೆಂಪುಕುಂಬಳ ಮತ್ತು ಬಿಳಿಬಣ್ಣದ್ದು. ಕೆಂಪುಕುಂಬಳವನ್ನು ಸಿಹಿಗುಂಬಳ ಎಂದೂ, ಬಿಳಿಬಣ್ಣದ್ದನ್ನು ಬೂದುಗುಂಬಳ ಎಂದೂ ಕರೆಯುತ್ತಾರೆ.
ಸಿಹಿಕುಂಬಳಕಾಯಿಯಲ್ಲಿ ತೇವಾಂಶ, ಸಸಾರಜನಕ, ಮೇದಸ್ಸು, ಖನಿಜಾಂಶ ಕಾರ್ಯೋಹೈಡ್ರೇಟ್ಸ್, ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಷಿಯಂ, ಗಂಧಕ, ಕಬ್ಬಿಣ, ತಾಮ್ರ, ವಿಟಮಿನ್ ಎ, ಬಿ೧, ಬಿ೨, ಸಿ ಸಮೃದ್ಧಿಯಾಗಿದೆ. ಸಿಹಿಕುಂಬಳದಿಂದ ಪಲ್ಯ, ಹುಳಿ, ಕೂಟು, ಪಾಯಸ, ಬರ್ಫಿ, ಕೇಕ್, ರೊಟ್ಟಿ, ಗೊಜ್ಜು ಪದಾರ್ಥಗಳನ್ನು ಮಾಡಬಹುದು.
೧. ದೇಹಕ್ಕೆ ಪುಷ್ಠಿ: ಬಲಿತು ಹಣ್ಣಾಗಿರುವ ಸಿಹಿಕುಂಬಳಕಾಯಿ ಹೆಚ್ಚು ರುಚಿಕರ ಹಾಗೂ ಇದು ವೀರ್‍ಯಗಳನ್ನು ವೃದ್ಧಿಸುವುದು. ಮಲಮೂತ್ರಗಳನ್ನು ಸಡಿಲಪಡಿಸುವುದು. ಪಿತ್ತವಿಕಾರ, ಮೂಲವ್ಯಾಧಿ, ಹೊಟ್ಟೆಉಬ್ಬರ, ರಕ್ತವಿಕಾರವನ್ನು ಗುಣಪಡಿಸುತ್ತದೆ.
೨. ಸಿಹಿಕುಂಬಳಕಾಯಿಯ ಬೀಜ: ಸಿಹಿಕುಂಬಳಕಾಯಿಯ ಬೀಜ ಹೆಚ್ಚು ರುಚಿಕರ ಮತ್ತು ಪುಷ್ಠಿಕರ. ಹೃದಯ ಮತ್ತು ಮೆದುಳಿಗೆ ವಿಶೇಷ ಬಲವನ್ನು ಕೊಡುತ್ತದೆ. ಹೃದಯ ಮತ್ತು ಮೆದುಳಿನ ದುರ್ಬಲತೆ ಇರುವವರು ಸತತವಾಗಿ ಬೀಜವನ್ನು ತಿನ್ನುವುದರಿಂದ ಅಥವಾ ಬೀಜವನ್ನು ಹಾಲಿನಲ್ಲಿ ಅರೆದು ಕುಡಿಯುವುದರಿಂದ ತುಂಬಾ ಲಾಭ ತರುವುದು.
೩. ಮಾನಸಿಕ ದೌರ್ಬಲ್ಯ: ಇದರ ಬೀಜದ ಚೂರ್ಣವನ್ನು ಜೇನಿನೊಡನೆ ಸೇವಿಸುತ್ತಿದ್ದರೆ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಹೆಚ್ಚು ಮೆದುಳಿಗೆ ಕೆಲಸ ಕೊಟ್ಟು ಕಾರ್ಯ ನಿರ್ವಹಿಸುವವರಿಗೆ ಈ ಬೀಜದ ಪುಡಿ ತುಂಬಾ ಸಹಕಾರಿ.
೪. ತೆಳ್ಳಗಿರುವವರಿಗೆ: ಸಿಹಿಕುಂಬಳಕಾಯಿಯ ಬೀಜ ಹಾಗೂ ಬಾದಾಮಿಯನ್ನು ಅರೆದು ಜೇನಿನೊಡನೆ ಸೇವಿಸುತ್ತಿದ್ದರೆ, ಶರೀರದ ತೂಕ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
೫. ಸುಟ್ಟಗಾಯಗಳಿಗೆ: ಸಿಹಿಕುಂಬಳಕಾಯಿಯ ಎಲೆಯ ರಸವನ್ನು ಸುಟ್ಟಗಾಯಕ್ಕೆ ಲೇಪಿಸುವುದರಿಂದ ಉರಿ ಕಡಿಮೆಯಾಗುತ್ತದೆ.
೬. ಹುಳುಕಚ್ಚಿದಾಗ: ಸಿಹಿಕುಂಬಳಕಾಯಿಯ ತೊಟ್ಟನ್ನು ನೀರಿನಲ್ಲಿ ತೇಯ್ದು ಹುಳು ಕಚ್ಚಿದ ಜಾಗಕ್ಕೆ ಹಚ್ಚಿದರೆ, ನೋವು ಹಾಗೂ ಕೆರೆತ ಕಡಿಮೆಯಾಗುತ್ತದೆ.
೭. ಜಂತುಹುಳುಗಳ ನಿವಾರಣೆಗೆ: ಹೊಟ್ಟೆಯ ಒಳಗೆ ಇರುವ ಜಂತುಹುಳುಗಳ ನಿವಾರಣೆಗೆ ಸಿಹಿಕುಂಬಳಕಾಯಿಯ ಬೀಜಗಳನ್ನು ಜಜ್ಜಿ ರಸ ತೆಗೆದು ಕುಡಿದರೆ, ಜಂತುಹುಳುಗಳು ಮೂತ್ರದ ಜೊತೆಗೆ ಹೊರಹೋಗುತ್ತವೆ.
೮. ಕುರು ಆದಾಗ: ದೇಹದ ಯಾವುದೇ ಭಾಗದಲ್ಲಿ ಕುರು ಆದರೂ ಆ ಸ್ಥಳಕ್ಕೆ ಸಿಹಿಕುಂಬಳಕಾಯಿಯ ಎಲೆಯನ್ನು ಬಿಸಿಮಾಡಿ ಕಟ್ಟಿದರೆ ಕುರು ಒಡೆದು ಕೀವು ಹೊರಬಂದು, ಗಾಯ ಮಾಯುತ್ತದೆ.
೯. ಮೂತ್ರಪಿಂಡಗಳ ಆರೋಗ್ಯ: ಸಿಹಿಕುಂಬಳಕಾಯಿಯ ಒಳಗಿನ ಬೀಜ ಮೂತ್ರಪಿಂಡಗಳ ಆರೋಗ್ಯ ಹಾಗೂ ರಕ್ಷಣೆಗೆ ಸಹಾಯಕವಾಗುವುದು.
೧೦. ಜೀರ್ಣಶಕ್ತಿ: ಸಿಹಿಕುಂಬಳಕಾಯಿಯ ಎಲೆಯನ್ನು ಅಡುಗೆಯಲ್ಲಿ ಬಳಸುವುದರಿಂದ ಜೀರ್ಣಶಕ್ತಿಯು ವೃದ್ಧಿಸುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧