
ರಾಯಚೂರು, ಫೆ.೨೮- ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನ ಖಂಡಿಸಿ ಎಎಪಿ ಕಾರ್ಯಕರ್ತರು ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ದೆಹಲಿಯ ಶಿಕ್ಷಣ ಕ್ರಾಂತಿಯನ್ನು ಸಹಿಸದ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ದೇಶಾದ್ಯಂತ ಎಎಪಿ ಬೆಳೆಯುತ್ತಿರುವುದನ್ನು ಕಂಡು ಹೆದರಿಸಲು ಬಿಜೆಪಿ ಸಿಸೋದಡಿ ಅವರನ್ನು ಬಂಧಿಸಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ, ಗೃಹ ಸಚಿವ ಮತ್ತು ಸಿಬಿಐ ವಿರುದ್ಧ ಘೋಷಣೆ ಕೂಗಿದರು. ಸಿಸೋಡಿಯಾ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ದೆಹಲಿ ಸರ್ಕಾರ ದೇಶದಲ್ಲೇ ಮಾದರಿ ಆಡಳಿತ ನಡೆಸುತ್ತಿದೆ. ಉತ್ತಮ ಶಿಕ್ಷಣ, ಉಚಿತ ಸಾರಿಗೆ ವ್ಯವಸ್ಥೆ, ವಿದ್ಯುತ್, ಕುಡಿಯುವ ನೀರು ಒದಗಿಸುವ ಮೂಲಕ ಜನ ಸ್ನೇಹಿ ಆಡಳಿತ ನೀಡುತ್ತಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜನಪ್ರಿಯತೆ ಸಹಿಸದೆ ದೆಹಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಪಕ್ಷದ ಮುಖಂಡ ಕೆ. ಬಸವರಾಜ ಗುತ್ತೇದಾರ ಆಕ್ರೋಶ ವ್ಯಕ್ತಪಡಿಸಿದರು.
ಕೇಜ್ರಿವಾಲ್ ಪ್ರಧಾನಿಯಾಗುತ್ತಾರೆ ಎಂಬ ಆತಂಕ ಬಿಜೆಪಿಗೆ ಶುರುವಾಗಿದೆ. ಹಾಗಾಗಿ ಕೇಜ್ರಿವಾಲ್ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳ ವಿರುದ್ಧ ಸಿಬಿಐ, ಇ.ಡಿಯಂತಹ ತನಿಖಾ ಸಂಸ್ಥೆಗಳನ್ನು ಪ್ರಯೋಗಿಸುತ್ತಿದ್ದಾರೆ. ಇದರಿಂದ ಪಕ್ಷ ಮತ್ತು ಕೇಜ್ರಿವಾಲ್ ಅವರ ವರ್ಚಸ್ಸು ಕುಂದಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಿಸೋಡಿಯಾ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.ದೆಹಲಿಯ ಅಬಕಾರಿ ನೀತಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ, ನೂತನ ಅಬಕಾರಿ ನೀತಿಯನ್ನು ದೆಹಲಿಯಲ್ಲಿ ಇನ್ನೂ ಜಾರಿಗೆ ತಂದಿಲ್ಲ ಹಾಗೂ ಹಲವು ರಾಜ್ಯಗಳಲ್ಲಿ ಇದೇ ನೀತಿ ಜಾರಿಯಲ್ಲಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಸುಮಾರು ಒಂದು ವರ್ಷದಿಂದ ಕೇಂದ್ರ ಸರ್ಕಾರದ ತನಿಖಾಧಿಕಾರಿಗಳು ಸಿನೋಡಿಯಾರವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದರೂ, ಆರೋಪವನ್ನು ಸಾಬೀತುಪಡಿಸುವಂತಹ ಯಾವುದೇ ಸಣ್ಣ ಸಾಕ್ಷಿ ಸಿಕ್ಕಿಲ್ಲ. ನಗದು ಅಥವಾ ಯಾವುದೇ ಅಕ್ರಮ ದಾಖಲೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅಮ್ ಆದ್ರಿ ಪಾರ್ಟಿಯೊಂದೇ ಬಿಜೆಪಿಯನ್ನು ಎದುರಿಸುವ ಏಕೈಕ ಶಕ್ತಿ ಎಂಬುದನ್ನು ಅರಿತಿರುವ ಬಿಜೆಪಿಯು ನಮ್ಮನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೇ, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ತೊಂದರೆ ನೀಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಟಿ ಪೂಜಾ ರಮೇಶ, ಎಎಪಿ ಕಾರ್ಯಕರ್ತರು ಸೇರಿದಂತೆ ಉಪಸ್ಥಿತರಿದ್ದರು.