ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸೆರೆ

ನವದೆಹಲಿ, ಫೆ.26- ನೀತಿ ಅಕ್ರಮ ಹಗರಣದ ತನಿಖೆಯ ಜೊತೆಗೆ ಸಾಕಷ್ಟು ವಿಚಾರಣೆ ಬಳಿಕ ದೆಹಲಿ ಅಬಕಾರಿ ಕೇಂದ್ರೀಯ ತನಿಖಾ ದಳ (ಸಿಬಿಐ)ದ ಅಧಿಕಾರಿಗಳು ಇಂದು ದೆಹಲಿಯ ಉಪಮುಖ್ಯಮಂತ್ರಿ ಹಾಗೂ ಆಪ್‌ನ ಹಿರಿಯ ನಾಯಕ ಮನೀಶ್‌ ಸಿಸೋಡಿಯಾರನ್ನು ಬಂಧಿಸಿದ್ದಾರೆ. ಬೆಳಿಗ್ಗೆಯಿಂದ ಸುಮಾರು 8 ಗಂಟೆಗಳ ಕಾಲ ನಡೆದ ವಿಚಾರಣೆಯ ಬಳಿಕ ಮನೀಶ್‌ ಸಿಸೋಡಿಯಾರನ್ನು ಬಂಧಿಸಲಾಗಿದೆ.
ಸಿಬಿಐನಿಂದ ಮನೀಶ್‌ ಸಿಸೋಡಿಯಾ ಅವರ ವಿಚಾರಣೆ ನಡೆಯಲು ಆರಂಭವಾಗುತ್ತಿದ್ದಂತೆ ಆಮ್‌ ಆದ್ಮಿ ಪಕ್ಷದ ಕಾರ್ಯರ್ತರಿಂದ ಸಿಬಿಐ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ  ಎಎಪಿ ಸಂಸದ ಸಂಜಯ್ ಸಿಂಗ್ ಮತ್ತು ಸಚಿವ ಗೋಪಾಲ್ ರೈ ಸೇರಿದಂತೆ 50 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಪ್ರದೇಶದಲ್ಲಿ ಸೆಕ್ಷನ್ 144 ಸಿಆರ್‌ಪಿಸಿ ವಿಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಬಕಾರಿ ಇಲಾಖೆಯ ಐಎಎಸ್ ಅಧಿಕಾರಿಯೊಬ್ಬರು ವಿಚಾರಣೆ ವೇಳೆ ಸಿಸೋಡಿಯಾ ಅವರ ಹೆಸರನ್ನು ಹೇಳಿದ್ದರು, ಇದರಿಂದಾಗಿ ಈ ಪ್ರಕರಣದಲ್ಲಿ ಅವರ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ‘ಸಿಸೋಡಿಯಾ ಇಂತಹ ಮದ್ಯದ ನೀತಿಯನ್ನು ಮಾಡಿದ್ದು, ಇದರಿಂದ ಸರ್ಕಾರಕ್ಕೆ ಲಾಭವಾಗುವುದಿಲ್ಲ, ವ್ಯಾಪಾರಿಗಳು ಭಾರಿ ಲಾಭ ಪಡೆಯುತ್ತಾರೆ. ಈ ಹೇಳಿಕೆಯ ಆಧಾರದ ಮೇಲೆ ಸಿಸೋಡಿಯಾ ಅವರನ್ನು ವಿಚಾರಣೆ ನಡೆಸಲಾಗಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಬಿಐ ತನಿಖೆಗಾಗಿ ಮನೆಯಿಂದ ಹೊರಡುವ ಮುನ್ನ ಮನೀಶ್‌ ಸಿಸೋಡಿಯಾ ತಮ್ಮ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದರು. ಬಳಿಕ ರೋಡ್‌ ಶೋ ನಡೆಸುತ್ತಲೇ ಸಿಬಿಐ ಕಚೇರಿಗೆ ತಲುಪಿದ್ದರು. ಈ ವೇಳೆ ಸಿಸೋಡಿಯಾ ಅವರ ಸಾವಿರಾರು ಬೆಂಬಲಿಗರು ಜೊತೆಗಿದ್ದರು.
ಸಿಬಿಐ ಕೇಂದ್ರ ಕಚೇರಿ ಬಳಿ ದೊಡ್ಡ ಡ್ರಾಮಾ ನಡೆಸಿದ ಆಪ್‌ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಕಾನೂನು ಸುವ್ಯವಸ್ಥೆ ಹದಗೆಡಬಾರದು ಎಂಬ ಉದ್ದೇಶದಿಂದ ಆಪ್‌ನ ಹಿರಿಯ ನಾಯಕರನ್ನು ಬಂಧನ ಮಾಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಸಿಬಿಐ ಕಚೇರಿಗೆ ತೆರಳುವ ಮುನ್ನ ಸಿಸೋಡಿಯಾ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ತಮ್ಮನ್ನು ಭಗತ್ ಸಿಂಗ್ ಅವರ ಅನುಯಾಯಿ ಎಂದು ಹೇಳಿಕೊಂಡ ಅವರು, ಭಗತ್‌ ಸಿಂಗ್‌ ದೇಶಕ್ಕಾಗಿ ಹುತಾತ್ಮರಾದರು, ಸುಳ್ಳು ಆರೋಪ ಮಾಡಿ ಜೈಲಿಗೆ ಹೋಗುವುದು ನಮಗೆ ಸಣ್ಣ ವಿಷಯ. ಪ್ರಧಾನ ಕಛೇರಿಯನ್ನು ನಿಗದಿತ ಸಮಯದಲ್ಲಿ ತಲುಪಬೇಕಾಗಿತ್ತಾದರೂ, ರೋಡ್‌ ಶೋ ಕಾರಣದಿಂದ 15 ನಿಮಿಷ ತಡವಾಗಿ ತಲುಪಿದರು.
ಸಿಬಿಐ ಕಚೇರಿ ತಲುಪುವ ಮುನ್ನವೇ ಜನರೊಂದಿಗೆ ಮಾತನಾಡಿದ ಅವರು ‘ನಾನು ಟಿವಿ ಚಾನೆಲ್‌ನಲ್ಲಿದ್ದಾಗ. ಒಳ್ಳೆಯ ಸಂಬಳವಿತ್ತು, ಆ್ಯಂಕರ್ ಕೂಡ ಆಗಿದ್ದೆ. ಜೀವನ ಚೆನ್ನಾಗಿ ಸಾಗುತ್ತಿತ್ತು. ಎಲ್ಲವನ್ನೂ ಬಿಟ್ಟು ಕೇಜ್ರಿವಾಲ್ ಜಿ ಅವರ ಜೊತೆ ಬಂದೆ. ಕೊಳೆಗೇರಿಗಳಲ್ಲಿ ಕೆಲಸ ಮಾಡಲು ಆರಂಭ ಮಾಡಿದೆ.
ಇಂದು ನನ್ನನ್ನು ಜೈಲಿಗೆ ಕಳುಹಿಸುವಾಗ ನನ್ನ ಹೆಂಡತಿ ಮನೆಯಲ್ಲಿ ಒಬ್ಬಳೇ ಇರುತ್ತಾಳೆ. ಅವಳು ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಮಗ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾನೆ. ನೀವು ಅವರ ಕಾಳಜಿ ವಹಿಸಬೇಕು’ ಎಂದು ಹೇಳಿದರು. ಸತತ 9 ಗಂಟೆ ಮನೀಶ್ ಸಿಸೋಡಿಯಾ ವಿಚಾರಣೆ, ಇದು ಆಪರೇಶನ್ ಕಮಲದ ಪ್ರಯತ್ನ ಎಂದ ಆಪ್ ನಾಯಕ  ‘ಶಾಲೆಗಳಲ್ಲಿ ಓದುವ ಮಕ್ಕಳನ್ನು ನಾನು ಪ್ರೀತಿಸುತ್ತೇನೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಶಿಕ್ಷಣ ಸಚಿವ ಮನೀಶ್ ಚಾಚಾ ಜೈಲಿಗೆ ಹೋಗಿ ಬಂದಿದ್ದು, ರಜೆ ಬಂತು ಎಂದು ಭಾವಿಸಬೇಡಿ. ರಜೆ ಇರುವುದಿಲ್ಲ. ನಾನು ನಿರೀಕ್ಷಿಸಿದಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ. ಚೆನ್ನಾಗಿ ಉತ್ತೀರ್ಣರಾಗಲು ಮನಸ್ಸಿಟ್ಟು ಓದಿ. ನಮ್ಮ ಮಕ್ಕಳು ನಿರ್ಲಕ್ಷ್ಯ ತೋರಿದ್ದಾರೆಂದು ತಿಳಿದರೆ ನನಗೆ ಬೇಸರವಾಗುತ್ತದೆ. ಈ ವಿಷಯ ಗೊತ್ತಾದರೆ ನಾನು ತಿನ್ನುವುದನ್ನು ಬಿಡುತ್ತೇನೆ’ ಎಂದು ಹೇಳಿದ್ದರು.