ಸಿಸಿಬಿ ಭರ್ಜರಿ ಬೇಟೆ:೧೨ ಕೋಟಿ ರೂ. ಗಾಂಜಾ ಜಪ್ತಿ

ಆರೋಪಿಗಳು ಅಂದರ್
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು ನಗರ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿರುವ ೧೨ ಕೋಟಿ ರೂ. ಮೌಲ್ಯದ ಗಾಂಜಾವನ್ನು ಪರಿಶೀಲಿಸುತ್ತಿರುವ ನಗರ ಪೊಲೀಸ್ ಆಯುಕ್ತ ದಯಾನಂದ್. ಸಿಸಿಬಿ ಪೊಲೀಸ್ ಅಧಿಕಾರಿಗಳು ಇದ್ದಾರೆ.

ಬೆಂಗಳೂರು,ಜು.೧೫:ಅಂತಾರಾಜ್ಯ ಗಾಂಜಾ ಮಾರಾಟ ಜಾಲವನ್ನು ಪತ್ತೆಹಚ್ಚಿ ಮೂವರು ಡ್ರಗ್ ಫೆಡ್ಲರ್‌ಗಳನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಸಿಸಿಬಿ ಪೊಲೀಸರು ೧೨ ಕೋಟಿ ರೂ.ಮೌಲ್ಯದ ಗಾಂಜಾ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಬೆಂಗಳೂರಿನ ಸಲ್ಮಾನ್ (೨೨), ಆಂಧ್ರದ ಲಕ್ಷ್ಮಿ ಮೋಹನ್‌ದಾಸ್ (೨೩) ಹಾಗೂ ರಾಜಸ್ತಾನದ ಚಂದ್ರಬಾನ್ ಬಿಷ್ಣೋಹಿ (೨೪) ಬಂಧಿತ ಡ್ರಗ್ ಪೆಡ್ಲರ್‌ಗಳಾಗಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ತಿಳಿಸಿದರು.ಆರೋಪಿ ಚಂದ್ರಬಾನ್ ಬಿಷ್ಣೋಹಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಮತ್ತೊಬ್ಬ ಆರೋಪಿ ಬಿಎ ಪದವೀಧರನಾದ ಲಕ್ಷ್ಮಿ ಮೋಹನ್‌ದಾಸ್ ಹಾಗೂ ಸಲ್ಮಾನ್ ಜತೆ ಸೇರಿ ಹೊರ ರಾಜ್ಯಗಳಲ್ಲಿ ಕಡಿಮೆ ಹಣಕ್ಕೆ ಗಾಂಜಾ ಖರೀದಿಸಿಕೊಂಡು ಬಂದು ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ಶೇಖರಿಸಿ ವಿವಿಧ ರೂಪಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂದರು.
ಬಂಧಿತ ಆರೋಪಿಗಳಿಂದ ೧೨ ಕೋಟಿ ರೂ. ಮೌಲ್ಯದ ೧,೫೦೦ ಕೆಜಿ ಗಾಂಜಾ ಹಾಗೂ ಗೂಡ್ಸ್‌ವನ್ನು ವಶಪಡಿಸಿಕೊಂಡು ಜಾಲದಲ್ಲಿ ಸಿಲುಕಿ ತಲೆ ಮರೆಸಿಕೊಂಡಿರುವವರ ಪತ್ತೆಗೆ ಶೋಧ ಕೈಗೊಳ್ಳಲಾಗಿದೆ ಎಂದರು.ಚಾಮರಾಜಪೇಟೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಸಲ್ಮಾನ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಗಾಂಜಾ ಮಾರಾಟ ಸಕ್ರಿಯೆ ಜಾಲ ಪತ್ತೆಯಾಗಿದ್ದು, ಆತನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿ ಇನ್ನಿಬ್ಬರನ್ನು ಸೆರೆ ಹಿಡಿಯಲಾಯಿತು ಎಂದರು.
ಆಂಧ್ರಪ್ರದೇಶದ ವಿಶಾಖಪಟ್ಟಣದ ಸಮೀಪ ಮೂರು ವಾರಗಳ ಕಾಲ ಹಗಲಿರುಳು ಕಾರ್ಯಾಚರಣೆ ನಡೆಸಿ ಚಂದ್ರಬಾನ್ ಬಿಷ್ಣೋಹಿ ಹಾಗೂ ಲಕ್ಷ್ಮಿ ಮೋಹನ್‌ದಾಸ್‌ನನ್ನು ಬಂಧಿಸಲಾಯಿತು. ಅವರಿಂದ ೧,೫೦೦ ಕೆಜಿ ಗಾಂಜಾ ಹಾಗೂ ಅದನ್ನು ಜಪ್ತಿ ಮಾಡಲು ಉಪಯೋಗಿಸುತ್ತಿದ್ದ ಗೂಡ್ಸ್ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಆರೋಪಿಗಳು ಕಾಡಿನಿಂದ ಗಾಂಜಾವನ್ನು ಸ್ಥಳೀಯರಿಂದ ಖರೀದಿಸಿಕೊಂಡು ಬಂದು ಗೂಡ್ಸ್ ವಾಹನದಲ್ಲಿ ಸಾಗಿಸುವಾಗ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರ ಕಣ್ತಪ್ಪಿಸಲು ವಾಹನದ ಹಿಂಬದಿಯಲ್ಲಿ ರಹಸ್ಯ ಕಂಪಾರ್ಟ್‌ಮೆಂಟ್ ಮಾಡಿಸಿಕೊಂಡಿದ್ದರು. ಪೊಲೀಸರಿಗೆ ಅನುಮಾನ ಬಾರದ ರೀತಿಯಲ್ಲಿ ಗಾಂಜಾವನ್ನು ಫ್ಲಿಪ್‌ಕಾರ್ಟ್, ರಟ್ಟಿನ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಿ ಸಾಗಾಣಿಕೆ ಮಾಡುತ್ತಿದ್ದರು ಎಂದು ಹೇಳಿದರು.ಆರೋಪಿಗಳು ಪೊಲೀಸರ ಕಣ್ತಪ್ಪಿಸಿ ಗಾಂಜಾ ಸಾಗಿಸಲು ವಾಹನಕ್ಕೆ ರಹಸ್ಯ ಕಂಪಾರ್ಟ್‌ಮೆಂಟ್ ಮಾಡಿಸಿ ವಿವಿಧ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲು ಅವಕಾಶ ಮಾಡಿಕೊಂಡಿದ್ದರು ಎಂಬುದು ತನಿಖೆಯಲ್ಲಿ ಕಂಡು ಬಂದಿದೆ.ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ ಅವರು ಡ್ರಗ್ಸ್ ಕುರಿತು ಸಮರ ಸಾರಿದ್ದು, ಹಲವು ದಿನಗಳ ಶ್ರಮಿಸಿ ಅಂತಾರಾಜ್ಯ ಗಾಂಜಾ ಮಾರಾಟ ಜಾಲ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ, ಡಿಸಿಪಿ ಯತೀಶ್‌ಚಂದ್ರ ಇದ್ದರು.