ಸಿಸಿಬಿ ಬಲೆಗೆ ಶಂಕಿತ ಉಗ್ರ

ಬೆಂಗಳೂರು,ಜು.೨೫-ಸುಶಿಕ್ಷಿತ ನಗರ ಎಂದೇ ಖ್ಯಾತಿ ಪಡೆದಿದ್ದ ರಾಜಧಾನಿ ಬೆಂಗಳೂರು ಉಗ್ರರ ಅಡಗುತಾಣವಾಗುತ್ತಿರುವ ಆತಂಕ ಎದುರಾಗಿದೆ. ಕೆಲದಿನಗಳ ಹಿಂದಷ್ಟೇ ಶ್ರೀರಾಂಪುರದಲ್ಲಿ ಉಗ್ರನೊಬ್ಬ ಸಿಕ್ಕಿಬಿದ್ದ ಬೆನ್ನಲ್ಲೇ ನಿನ್ನೆ ರಾತ್ರಿ ತಿಲಕ್ ನಗರದಲ್ಲಿ ಅಡಗಿದ್ದ ಶಂಕಿತ ಉಗ್ರನನ್ನು ಸಿಸಿಬಿ ಪೊಲೀಸರು ಬಲೆಗೆ ಕೆಡವಿದ್ದಾರೆ.

ಹಲವು ದಿನಗಳಿಂದ ತಿಲಕನಗರದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದ ಲಷ್ಕರ್-ಎ-ತೈಬಾ ಸಂಘಟನೆಯ ನಂಟು ಹೊಂದಿದ ಶಂಕಿತ ಉಗ್ರನ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಪೊಲೀಸರು ರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಬಂಧಿತ ಶಂಕಿತ ಉಗ್ರನಾಗಿದ್ದು ಈತನ ಸಂಪರ್ಕದಲ್ಲಿದ್ದ ಇನ್ನೂ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.ತಿಲಕ್ ನಗರದ ಬಿಟಿಪಿ ಪ್ರದೇಶದ ಕಟ್ಟಡದ ೩ನೇ ಮಹಡಿಯಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡು ಶಂಕಿತ ಉಗ್ರ ಅಖ್ತರ್ ಹಲವು ದಿನಗಳಿಂದ ವಾಸವಾಗಿದ್ದು ಆತ ಮೂಲಭೂತಿವಾದಿಯಾಗಿದ್ದ ಎನ್ನುವುದು ವಿಚಾರಣೆಯಲ್ಲಿ ಖಚಿತವಾಗಿದೆ ಎಂದರು.ಕೇಂದ್ರ,ರಾಜ್ಯದ ಗುಪ್ತಚರ ಮಾಹಿತಿ ಹಾಗೂ ಸ್ಥಳೀಯ ಮೂಲಗಳಿಂದ ಮಾಹಿತಿಯನ್ನು ಕಲೆಹಾಕಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ತಿಲಕ್ ನಗರದಲ್ಲಿ ವಾಸವಾಗಿದ್ದ ಶಂಕಿತ ಉಗ್ರನ ನಿವಾಸ.

ಶಂಕಿತ ಉಗ್ರ ಅಖ್ತರ್ ಸೇರಿ ಆತನ ಜೊತೆಗೆ ರೂಮ್?ನಲ್ಲಿದ್ದ ಇತರ ಮೂವರು ಯುವಕರು ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದು,
ನಾಲ್ವರೂ ಸಹ ರಾತ್ರಿ ವೇಳೆ ಮಾತ್ರ ಓಡಾಟ ನಡೆಸುತ್ತಿದ್ದರು ಈ ನಾಲ್ವರಲ್ಲಿ ಯಾರೊಬ್ಬರೂ ಸ್ಥಳೀಯರೊಂದಿಗೆ ಸಂಪರ್ಕದಲ್ಲಿರಲಿಲ್ಲ ಎನ್ನುವುದು ತನಿಖೆಯಲ್ಲಿ ಕಂಡುಬಂದಿದೆ.ಶಂಕಿತ ಉಗ್ರನ ವಾಸ್ತವ್ಯ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿಯ ೩೦ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡ ತಂಡವು ನಿನ್ನೆ ಸಂಜೆ ೫ ಗಂಟೆಯಿಂದಲೇ ಮನೆ ಬಳಿ ಕಾದು ಕುಳಿತು ೭ ಗಂಟೆ ಸುಮಾರಿಗೆ ಅಖ್ತರ್ ಹುಸೇನ್ ಮನೆಗೆ ಬಂದಿದ್ದಾನೆ. ಕೆಲ ಹೊತ್ತಿನ ಬಳಿಕ ಜಮಾವಣೆಗೊಂಡ ಸಿಸಿಬಿ ತಂಡ ದಾಳಿ ನಡೆಸಿ ಶಂಕಿತ ಉಗ್ರನನ್ನು ಬಂಧಿಸಿ ಇತರ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಬಂಧಿತ ಶಂಕಿತ ಉಗ್ರ ಅಖ್ತರ್ ನನ್ನು ರಹಸ್ಯ ಸ್ಥಳದಲ್ಲಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸತೊಡಗಿದ್ದು ಇಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಶಕ್ಕೆ ತೆಗೆದುಕೊಂಡು ವಿಸ್ತೃತ ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿ ಯಾವ ಉಗ್ರಗಾಮಿ ಸಂಘಟನೆ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿದ್ದ ನಗರದಲ್ಲಿ ಇನ್ನೂ ಯಾರ ಜೊತೆಗೆ ಸಂಪರ್ಕ ಹೊಂದಿದ್ದ ಎನ್ನುವುದರ ಮಾಹಿತಿಯನ್ನು ಸಿಸಿಬಿ ಪೊಲೀಸರು ಕಲೆ ಹಾಕ ತೊಡಗಿದ್ದಾರೆ.
ಕಳೆದ ತಿಂಗಳಷ್ಟೇ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಆಗಿದ್ದ ತಾಲೀಬ್ ಹುಸೇನ್ ನನ್ನು ಬಂಧಿಸಲಾಗಿತ್ತು.ಶ್ರೀ ನಗರದಿಂದ
ಬಂದು ಶ್ರೀರಾಮಪುರದಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿ ತನಿಖೆಯನ್ನು ಕೈಗೊಂಡ ಬೆನ್ನಲ್ಲೇ ಸಿಸಿಬಿ ಪೊಲೀಸರು ತಮ್ಮದೇ ಮಾಹಿತಿಯನ್ನು ಕಲೆಹಾಕಿ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.
ಲಷ್ಕರ್-ಎ-ತೈಬಾ ನಂಟು:
ತಿಲಕ್ ನಗರದಲ್ಲಿ ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿತ ಶಂಕಿತ ಉಗ್ರ ಅಸ್ಸಾಂ ಮೂಲದ ಅಖ್ತರ್ ಹುಸ್ಸೇನ್ ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಜೊತೆಗೆ ನಂಟು ಹೊಂದಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡು ತಿಲಕ್ ನಗರದಲ್ಲಿ ವಾಸವಾಗಿದ್ದ ಶಂಕಿತ ಉಗ್ರ ಅಖ್ತರ್ ನಗರದಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ನಡೆಸುತ್ತಿರುವ ಮಾಹಿತಿಯನ್ನು ಕಲೆ ಹಾಕಿರುವ ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.