ಸಿಸಿಬಿ ಬಲೆಗೆ ಮೂವರು ಶ್ರೀಲಂಕಾ ಕ್ರಿಮಿನಲ್‌ಗಳು

ಬೆಂಗಳೂರು,ಆ. ೨೪-ನಗರಕ್ಕೆ ದೇಶ ವಿದೇಶಗಳಿಂದ ಆಗಮಿಸಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರಿಗೆ ನಗರದಲ್ಲಿ ಆಶ್ರಯ ಪಡೆದಿದ್ದ ಮೂವರು ಅಂತಾರಾಷ್ಟ್ರೀಯ ಮಟ್ಟದ ಕ್ರಿಮಿನಲ್‌ಗಳು ಸಿಕ್ಕಿಬಿದ್ದಿದ್ದಾರೆ.
ಶ್ರೀಲಂಕಾದ ಮೋಸ್ಟ್ ವಾಂಟೆಡ್ ಮೂವರು ಕ್ರಿಮಿನಲ್‌ಗಳು ಅವರಿಗೆ ಆಶ್ರಯ ನೀಡಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ. ಶ್ರೀಲಂಕಾದ ಕಾಸಿನ್ ಕುಮಾರ್, ಅಮಿಲಾ ನುವಾನ್, ರಂಗ ಪ್ರಸಾದ್ ಬಂಧಿತ ಆರೋಪಿಗಳಾಗಿದ್ದು ಇವರಿಗೆ ನಗರದಲ್ಲಿ ಆಶ್ರಯ ನೀಡಿದ್ದ ಜೈ ಪರಮೇಶ್ ಅಲಿಯಾಸ್ ಜಾಕ್‌ನನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರು ತಿಳಿಸಿದ್ದಾರೆ.
ಕೊಲೆ ಆರೋಪಿಯೂ ಆಗಿರುವ ಜೈ ಪರಮೇಶ್, ಯಲಹಂಕದ ವಿಶ್ವ ಪ್ರಕೃತಿ ಅಪಾರ್ಟ್?ಮೆಂಟ್?ನಲ್ಲಿ ಮೂವರು ಶ್ರೀಲಂಕಾದ ಪಾತಕಿಗಳಿಗೆ ಆಶ್ರಯ ಕಲ್ಪಿಸಿದ್ದ. ಪಾತಕಿ ಕಾಸಿನ್ ಕುಮಾರ್ ವಿರುದ್ಧ ಶ್ರೀಲಂಕಾದಲ್ಲಿ ೪ ಕೊಲೆ ಪ್ರಕರಣಗಳಿದ್ದರೆ, ಮತ್ತೊಬ್ಬ ಅಮಿಲಾ ನುವಾನ್ ಮೇಲೆ ೫ ಕೊಲೆ ಕೇಸ್, ರಂಗ ಪ್ರಸಾದ್ ವಿರುದ್ಧ ಹಲ್ಲೆ, ಕೊಲೆ ಕೇಸ್ ಪ್ರಕರಣ ದಾಖಲಾಗಿರುವ ಮಾಹಿತಿಯನ್ನು ಕಲೆಹಾಕಲಾಗಿದೆ.
ಬಂಧಿತರಿಂದ ೧೩ ಮೊಬೈಲ್ ಶ್ರೀಲಂಕಾದ ವಿವಿಧ ವಿಸಿಟಿಂಗ್ ಕಾರ್ಡ್, ಬಸ್ ಟಿಕೆಟ್, ಪೇಪರ್ ಕಟ್ಟಿಂಗ್ಸ್, ಬಾಡಿಗೆಗಿದ್ದ ಮನೆಯ ಅಗ್ರಿಮೆಂಟ್ ಪ್ರತಿ, ಆಧಾರ್‌ಕಾರ್ಡ್, ಚುನಾವಣಾ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಗಳನ್ನು ಜಪ್ತಿ ಮಾಡಲಾಗಿದೆ.
ಜಲಾನ್ ಎಂಬಾತನ ಆದೇಶದ ಮೇರೆಗೆ ಅಪಾರ್ಟ್‌ಮೆಂಟ್ ನಲ್ಲಿ ಅರೋಪಿಗಳು ವಾಸವಿದ್ದರು ಎನ್ನಲಾಗಿದ್ದು, ಜಲಾನ್ ಎಂಬಾತ ಓಮನ್ ದೇಶದಲ್ಲಿ ಬಂಧಿತನಾಗಿದ್ದಾನೆ.
ಆರೋಪಿ ಜಲಾನ್ ಶ್ರೀಲಂಕಾ, ಭಾರತ, ಪಾಕಿಸ್ತಾನಕ್ಕೆ ಲಿಂಕ್ ಹೊಂದಿದ್ದು, ಡ್ರಗ್ಸ್ ಟ್ರಾಫಿಕಿಂಕ್ ನಡೆಸುತ್ತಿರುವುದಲ್ಲದೇ ಶ್ರೀಲಂಕಾದ ಎಲ್ ಟಿಟಿಇಗೆ ಲಿಂಕ್ ಇರುವ ಬಗ್ಗೆ ಮಾಹಿತಿ ಪತ್ತೆಯಾಗಿದ್ದು,ಇದನ್ನು ಗಮನಿಸಿದರೆ ಬಂಧಿತ ಲಂಕಾದ ಅರೋಪಿಗಳು ಎಲ್‌ಟಿಟಿಇಗೆ ಸೇರಿದವರು ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು ವಿಸ್ತೃತ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಶ್ರೀಲಂಕಾದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳು ಭಾರತಕ್ಕೆ ಪ್ರವೇಶಿದ್ದೇ ರೋಚಕವಾಗಿದೆ. ಶ್ರೀಲಂಕಾದಿಂದ ಭಾರತಕ್ಕೆ ಬೋಟ್ ನಲ್ಲಿ ಆಗಮಿಸಿದ್ದು, ಬೋಟ್‌ನಲ್ಲಿ ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆಯ ಕಣ್ತಪ್ಪಿಸಿ ಭಾರತ ಪ್ರವೇಶಿಸಿದ್ದಾರೆ.
ಚೆನ್ನೈ ಬಳಿಯ ಸಮುದ್ರ ತೀರಕ್ಕೆ ಬೋಟ್‌ನಲ್ಲಿ ಬಂದಿದ್ದು, ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಬಂದಿಳಿದಿದ್ದರು. ಸದ್ಯದ ಮಾಹಿತಿ ಪ್ರಕಾರ ಕಳೆದ ಇಪ್ಪತ್ತು ದಿನಗಳ ಹಿಂದೆ ಶ್ರೀಲಂಕಾದಿಂದ ಭಾರತಕ್ಕೆ ಬಂದಿದ್ದರು ಎನ್ನುವುದು ಪತ್ತೆಯಾಗಿದೆ.
ಅರೋಪಿಗಳ ವಿರುದ್ದ ಫಾರಿನ್ ಆಕ್ಟ್ ೧೯೪೬,(ಯುಸಿ-೧೪,೧೪(ಸಿ) ಐಪಿಸಿ ಸೆಕ್ಷನ್ ೧೦೯,೧೨೦ಬಿ೨೧೨ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.