ಸಿಸಿಬಿ ಬಂಧಿತ ಶಂಕಿತ ಉಗ್ರರಿಗೆ ಕಾಶ್ಮೀರಕ್ಕೆ ಆಹ್ವಾನಿಸಿದ್ದ ಅಲ್‌ಖೈದಾ

ಬೆಂಗಳೂರು,ಜು.೨೮-ಸಿಸಿಬಿ ಪೊಲೀಸರು ಬಂಧಿಸಿರುವ ಇಬ್ಬರು ಶಂಕಿತ ಉಗ್ರರು ಸಾಮಾಜಿಕ ಜಾಲತಾಣ ಟೆಲಿಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಉಗ್ರ ನಾಯಕರ ಭಾಷಣದ ವಿಡಿಯೋಗಳನ್ನು ಪೋಸ್ಟ್ ಮಾಡಿ ಯುವಕರನ್ನು ಪ್ರಚೋದಿಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.
ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ವಿಡಿಯೋ ಪೋಸ್ಟ್ ಮಾಡುತ್ತಿರುವ ಬಗ್ಗೆ ಈ ಹಿಂದೆ ಫೇಸ್‌ಬುಕ್ ಸಂಸ್ಥೆ ಇಬ್ಬರಿಗೆ ಎಚ್ಚರಿಸಿತ್ತು. ನಂತರ ಖಾತೆಗಳನ್ನು ರದ್ದು ಮಾಡಿದ್ದರೂ ಅಖ್ತರ್ ಹುಸೇನ್ ನಕಲಿ ಅಕೌಂಟ್ ತೆರೆದು ತನ್ನ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸಿದ್ದ. ಬೆಂಗಾಲಿ ಭಾಷೆಯಲ್ಲಿ ಪೋಸ್ಟ್ ಮಾಡಿರುವ ಬರಹಗಳು ಹಾಗೂ ವಿಡಿಯೋ ಕುರಿತಾಗಿ ಮಾಹಿತಿ ನೀಡುವಂತೆ ಫೇಸ್ ಬುಕ್, ಟೆಲಿಗ್ರಾಂ, ವಾಟ್ಸ್‌ಆಪ್ ಕಂಪನಿಗಳಿಗೆ ಸಿಸಿಬಿ ಪೊಲೀಸರು ಪತ್ರ ಬರೆದಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಉಗ್ರತ್ವದ ಬಗ್ಗೆ ಸಕ್ರಿಯವಾಗಿದ್ದರ ಕುರಿತು ಗಮನಿಸಿದ ಆಲ್ ಖೈದಾ ಸಂಘಟನೆಯ ಸದಸ್ಯರು, ಇವರನ್ನು ಸಂಪರ್ಕಿಸಿ ಜಿಹಾದ್ ಹೋರಾಟದ ಬಗ್ಗೆ ಬ್ರೈನ್ ವಾಶ್ ಮಾಡಿದ್ದರು.
ತಮಿಳುನಾಡಿನ ಸೇಲಂನಲ್ಲಿ ಬಂಧಿತನಾಗಿದ್ದ ಆದಿಲ್ ಹುಸೇನ್ ಉರುಫ್ ಜುಬಾನ್ ಎಂಬಾತ ಮನಪರಿವರ್ತಿಸಿದ್ದರು. ಅಚ್ಚರಿ ವಿಷಯವೆಂದರೆ, ಇಬ್ಬರು ಶಂಕಿತರಿಗೂ ಪರಸ್ಪರ ಪರಿಚಯವಿರಲಿಲ್ಲ. ನಾಲ್ಕು ತಿಂಗಳ ಹಿಂದಷ್ಟೇ ಆಲ್ ಖೈದಾ ಸಂಘಟನೆಯ ಪಶ್ಚಿಮ ಬಂಗಾಳ ಮೂಲದ ಉಗ್ರ ಇವರಿಬ್ಬರ ಸಂಪರ್ಕಕ್ಕೆ ಕಾರಣನಾಗಿದ್ದ. ಸಿಸಿಬಿ ಬಂಧಿಸುವ ಒಂದು ವಾರದ ಹಿಂದೆ ಇಬ್ಬರಿಗೆ ಕಾಶ್ಮೀರಕ್ಕೆ ಬನ್ನಿ ಎಂದು ಆಹ್ವಾನ ನೀಡಿರುವುದು ತನಿಖೆಯಲ್ಲಿ ಬಯಲಾಗಿದೆ.ಸೆರೆಸಿಕ್ಕ ಇಬ್ಬರು ಉಗ್ರರ ಬಳಿ ಅಲ್ ಖೈದಾ ಹ್ಯಾಂಡ್ಲರ್ ನಡೆಸಿರುವ ಸಂಭಾಷಣೆಯು ತನಿಖೆಯಲ್ಲಿ ಪತ್ತೆಯಾಗಿದ್ದು,ಈ ಸಂಬಂಧಿಸಿದಂತೆ ವಿಸ್ತೃತ ತನಿಖೆಯನ್ನು ನಡೆಸಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.ಶಂಕಿತ ಉಗ್ರರಾದ ಅಕ್ತರ್ ಹುಸೇನ್ ಮತ್ತು ಜುಬಾ ಜೊತೆ ಬಂಗಾಳಿ ಭಾಷೆಯಲ್ಲಿ ಅಲ್ ಖೈದಾ ಹ್ಯಾಂಡ್ಲರ್ ಒಬ್ಬ ಚಾಟ್ ನಡೆಸಿದ್ದಾನೆ. ಇಸ್ಲಾಂಗಿಂತ ದೊಡ್ಡ ಧರ್ಮವಿಲ್ಲ, ಅಲ್ಲಾಹುಗಾಗಿ ನೀವು ಎಲ್ಲದಕ್ಕೂ ಸಿದ್ಧರಿರಬೇಕೆಂದು ಯುವಕರ ತಲೆಕೆಡಿಸಿದ್ದಾನೆ. ದುಬೈಗೆ ಬಂದು ಅಫ್ಘಾನಿಸ್ಥಾನಕ್ಕೆ ಬನ್ನಿ, ಅಲ್ಲಿಂದ ಪಾಕಿಸ್ತಾನಕ್ಕೆ ಬರುವಂತೆ ಸೂಚಿಸಿದ್ದ. ಇದಕ್ಕಾಗಿ ೨ ಲಕ್ಷ ಹಣ ಹೊಂದಿಸಿಕೊಳ್ಳಲು ಹ್ಯಾಂಡ್ಲರ್ ಸೂಚಿಸಿದ್ದ. ಇಬ್ಬರ ಬಳಿ ಹಣ ಇಲ್ಲವೆಂದಾಗ ಕಾಶ್ಮೀರಕ್ಕೆ ಬನ್ನಿ. ಅಲ್ಲಿಂದ ಪಾಕಿಸ್ತಾನ ಗಡಿಯೊಳಗೆ ನಮ್ಮಲ್ಲಿ ಒಬ್ಬ ನಿಮ್ಮನ್ನ ಕರೆತರುತ್ತಾನೆ ಎಂದು ಸಂದೇಶ ರವಾನಿಸಿದ್ದ. ಸ್ಥಳ ತಲುಪಿದ ಮೇಲೆ ಹಣ ಹಾಗೂ ತರಬೇತಿ ಕೊಡಲಾಗುತ್ತದೆ. ಬಂದೂಕು ನಿಮ್ಮ ಕೈಲಿರುತ್ತೆ. ನೀವೇ ಅಧಿಪತಿ ಎಂದು ಆಮಿಷವೊಡ್ಡಿದ್ದ ಎಂದು ತಿಳಿದುಬಂದಿದೆ.
ಗ್ರಾಪಂ ಅಧ್ಯಕ್ಷ:
ಹಗಲಿನಲ್ಲಿ ಉಗ್ರವಾದ ಚಟುವಟಕೆಯಲ್ಲಿ ತಲ್ಲೀನರಾಗಿದ್ದ ಅಖ್ತರ್, ರಾತ್ರಿ ವೇಳೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಬರುವ ಸಂಬಳದಲ್ಲಿ ಪ್ರತಿ ತಿಂಗಳು ೧೦ ಸಾವಿರ ತನ್ನ ತಾಯಿಗೆ ಕಳುಹಿಸುತ್ತಿದ್ದ. ಅಸ್ಸಾಂ ಮೂಲದವನೇ ಆಗಿದ್ದು, ಅಕ್ತರ್ ತಂದೆ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿದ್ದ. ಮುಂದಿನ ವಾರದಲ್ಲಿ ಶಂಕಿತರು ರೈಲಿನಲ್ಲಿ ಕಾಶ್ಮೀರಕ್ಕೆ ಹೊರಡಲು ಸಜ್ಜಾಗಿದ್ದರು. ಅಷ್ಟರಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದಾರೆ.