ಸಿವಿಲ್ ಪ್ರಕ್ರಿಯೆ ತಿದ್ದುಪಡಿ ದುರ್ಬಲರಿಗೆ ಸಹಕಾರಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೨೦- ದೀರ್ಘಕಾಲದಿಂದ ನ್ಯಾಯಾಲಯದಲ್ಲಿ ಬಾಕಿ ಇರುವ ಸಣ್ಣ, ಅತಿಸಣ್ಣ ರೈತರು ಆರ್ಥಿಕವಾಗಿ ದುರ್ಬಲವಾದ ಜನರ ಪ್ರಕರಣಗಳನ್ನು ಆರು ತಿಂಗಳ ಕಾಲಮಿತಿಯೊಳಗಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ಸಿವಿಲ್ ಪ್ರಕ್ರಿಯಾ ಸಂಹಿತೆ ಕರ್ನಾಟಕ ತಿದ್ದುಪಡಿ ವಿಧೇಯಕ-೨೦೨೩ ಸಹಕಾರಿಯಾಗಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ವಿಧಾನಪರಿಷತ್‌ನಲ್ಲಿಂದು ಹೇಳಿದರು.
ಈ ವಿಧೇಯಕಕ್ಕೆ ಈಗಾಗಲೇ ವಿಧಾನಸಭೆ ಅಂಗೀಕಾರ ನೀಡಿದೆ. ವಿಧಾನಪರಿಷತ್‌ನಲ್ಲೂ ಅಂಗೀಕಾರವಾಗಿರುವುದರಿಂದ ಕಾನೂನು ಜಾರಿಗೆ ಬರಲಿದೆ. ಹೀಗಾಗಿ ದೀರ್ಘಕಾಲದಿಂದ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಆರು ತಿಂಗಳ ಕಾಲಮಿತಿಯೊಳಗಾಗಿ ಇತ್ಯರ್ಥಪಡಿಸಲು ನೆರವಾಗಲಿದೆ ಎಂದರು.
ಸಿವಿಲ್ ಪ್ರಕ್ರಿಯಾ ಸಂಹಿತೆ ಕರ್ನಾಟಕ ತಿದ್ದುಪಡಿ ವಿಧೇಯಕ-೨೦೨೩ ರನ್ನು ಸದನದಲ್ಲಿ ಮಂಡಿಸಿ ಪರಿಯಾಲೋಚಿಸುವಂತೆ ಮನವಿ ಮಾಡಿದರು.
ಆಗ ಸದನದಲ್ಲಿದ್ದ ವಿರೋಧ ಪಕ್ಷಗಳ ಸಾಲಿನಲ್ಲಿದ್ದ ಹೆಚ್. ವಿಶ್ವನಾಥ್, ಜೆಡಿಎಸ್‌ನ ಮರಿತಿಬ್ಬೇಗೌಡ, ಆಡಳಿತ ಪಕ್ಷದಿಂದ ಹಿರಿಯ ಸದಸ್ಯ ಜಗದೀಶ್‌ಶೆಟ್ಟರ್, ಯು.ಬಿ. ವೆಂಕಟೇಶ್, ಪ್ರಕಾಶ್ ಹುಕ್ಕೇರಿ, ನಜೀರ್ ಅಹಮದ್ ಅವರು ವಿಧೇಯಕದ ಮೇಲೆ ಚರ್ಚೆ ನಡೆಸಿ, ಹಲವು ಸಲಹೆ, ಸೂಚನೆ ನೀಡಿದ ಬಳಿಕ ಉತ್ತರಿಸಿದ ಸಚಿವರು, ಕಾನೂನು ಜಾರಿಗೆ ಬಂದ ನಂತರ ದೀರ್ಘಕಾಲದಿಂದ ನ್ಯಾಯಾಲಯದಲ್ಲ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಕೀಲರು ಪ್ರಕರಣವನ್ನು ಮುಂದೆ ಹಾಕಲು ಬರುವುದಿಲ್ಲ ಎಂದರು.
ಹೊಸ ಕಾನೂನು ಜಾರಿಯಿಂದಾಗಿ ನ್ಯಾಯಾಧೀಸರು, ವಕೀಲರು, ಸರ್ಕಾರಿ ವಕೀಲರು ಸೇರಿದಂತೆ ಎಲ್ಲರೂ ಈ ನಿಯಮಕ್ಕೆ ಬದ್ಧರಾಗಿರಬೇಕಾಗುತ್ತದೆ. ಪ್ರಕರಣದ ದಾಖಲಾದ ಆರು ತಿಂಗಳೊಳಗಾಗಿ ಇತ್ಯರ್ಥವಾಗಬೇಕು. ಅದಕ್ಕಾಗಿಯೇ ಈ ವಿಧೇಯಕವನ್ನು ಜಾರಿಗೆ ತರಲಾಗಿದೆ. ಇದರಿಂದ ಬಡ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಕಾನೂನು ವಿಶ್ವವಿದ್ಯಾಲಯಕ್ಕೆ ಕಾಯಕಲ್ಪ
ರಾಜ್ಯದ ಕಾನೂನು ವಿವಿಗೆ ಕಾಯಕಲ್ಪ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ವಿಧಾನಪರಿಷತ್‌ನಲ್ಲಿಂದು ಹೇಳಿದರು.ಸಿವಿಲ್ ಪ್ರಕ್ರಿಯೆ ಸಂಹಿತೆ ಕರ್ನಾಟಕ ತಿದ್ದುಪಡಿ ವಿಧೇಯಕದ ಮೇಲೆ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ವಿಷಯ ಪ್ರಸ್ತಾಪಿಸಿದ ವೇಳೆ ಕಾನೂನು ವಿವಿಯ ಲೋಪದೋಷಗಳನ್ನು ಸದನದ ಗಮನಕ್ಕೆ ತಂದ ನಂತರ ಪ್ರತಿಕ್ರಿಯಿಸಿದ ಸಚಿವರು, ವಿವಿ ಆರಂಭವಾಗಿ ಹತ್ತು ವರ್ಷಗಳಾಗಿದ್ದರೂ ಕಾಲ ಕಾಲಕ್ಕೆ ಬಂದ ಸರ್ಕಾರಗಳು ಸರಿಯಾದ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಪ್ರಗತಿ ಕಾಣಲು ಸಾಧ್ಯವಾಗಿಲ್ಲ. ತನ್ನ ಸ್ವಂತ ಖರ್ಚಿನಲ್ಲಿ ನಿರ್ವಹಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳಲ್ಲಿ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿತ್ತು ಎಂದು ಹೇಳಿದರು.
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವಿಶ್ವವಿದ್ಯಾಲಯಕ್ಕೆ ಕಾಯಕಲ್ಪ ನೀಡಲು ಮುಂದಾಗಿದ್ದೇವೆ. ಸರ್ಕಾರ ಬಂದಾಗಿನಿಂದ ೧೦೦ ದಿನಗಳೊಳಗಾಗಿ ಸರ್ಕಾರದ ಕಡೆಯಿಂದ ವಿಶ್ವವಿದ್ಯಾಲಯದಲ್ಲಿ ಯಾವುದೇ ಕಡತ ಬಾಕಿ ಇರದಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಧ್ವನಿಮತದ ಅಂಗೀಕಾರ
ನ್ಯಾಯಾಲಯಗಳಲ್ಲಿ ಬಡ ಜನರಿಗೆ ನ್ಯಾಯ ಒದಗಿಸಲು ಅನುಕೂಲವಾಗುವ ಸಿವಿಲ್ ಪ್ರಕ್ರಿಯಾ ಸಂಹಿತೆ ಕರ್ನಾಟಕ ತಿದ್ದುಪಡಿ ವಿಧೇಯಕ-೨೦೨೩ ಕ್ಕೆ ವಿಧಾನಪರಿಷತ್ ಧ್ವನಿ ಮತದ ಅಂಗೀಕಾರ ನೀಡಿತು.
ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿರುವ ವಿಧೇಯಕವನ್ನು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಂಡಿಸಿ, ಪರ್ಯಾಲೋಚಿಸುವಂತೆ ಸದನಕ್ಕೆ ಮನವಿ ಮಾಡಿದರು. ಹಲವು ಸದಸ್ಯರ ಚರ್ಚೆಯ ಬಳಿಕ ಸಭಾಪತಿ ಬಸವರಾಜಹೊರಟ್ಟಿ ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿ ಮತದ ಅಂಗೀಕಾರ ದೊರೆಯಿತು.