ಸಿವಿಲ್ ನ್ಯಾಯಾಲಯ ಕಾಯಂ ಬೇಡಿಕೆ ಬಗ್ಗೆ ಶೀಘ್ರ ಕ್ರಮ: ನ್ಯಾ. ನಟರಾಜನ್

ಜಗಳೂರು.ನ.೧೫;  ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯವನ್ನು ಕಾಯಂಗೊಳಿಸುವ ಬೇಡಿಕೆಯ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್ ನ್ಯಾಯಮೂರ್ತಿ ನಟರಾಜನ್ ಹೇಳಿದರು.

ಪಟ್ಟಣದ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ  ಭೇಟಿ ನೀಡಿದ್ದ, ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳು ಆಗಿರುವ ನಟರಾಜನ್ ಅವರು ತಾಲ್ಲೂಕು ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಪ್ರಸ್ತುತ ವಾರಕ್ಕೆ ಎರಡು ದಿನಗಳ ಕಾಲ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದ್ದು, ಕಾಯಂಗೊಳಿಸುವಂತೆ ವಕೀಲರ ಸಂಘ ಬೇಡಿಕೆ ಇಟ್ಟಿದೆ. ಬೆಂಗಳೂರಿಗೆ ತೆರಳಿದ ನಂತರ ನಾಳೆಯೇ ಈ ಬಗ್ಗೆ ಸಭೆ ಕರೆದು ಕಾಯಂ ನ್ಯಾಯಾಲಯ ಸ್ಥಾಪನೆ ಬಗ್ಗೆ ಅಗತ್ಯ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಹಾಗೆಯೇ ಸಹಾಯಕ ಸರ್ಕಾರಿ ವಕೀಲರು ಸಹ ಕಾಯಂ ಆಗಿ ಇಲ್ಲಿ ಸೇವೆ ಸಲ್ಲಿಸುವ  ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಜಗಳೂರು ತಾಲ್ಲೂಕಿಗೆ ಭೇಟಿ ನೀಡಬೇಕು ಎಂಬ ಬಹಳ ವರ್ಷಗಳ ಆಸೆ ಇಂದು ಈಡೇರಿದೆ. ಬಹಳ ವಿಶಾಲವಾದ ಸ್ಥಳದಲ್ಲಿ ಸುಂದರ ಹಾಗು ಸುಸಜ್ಜಿತ ಕಟ್ಟಡ ಹೊಂದಿರುವುದು ಸಂತಸದ ಸಂಗತಿಯಾಗಿದೆ. ಭಾನುವಾರ ರಜೆ ದಿನವಾಗಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ಸೇರಿದ್ದೀರಿ. ವಕೀಲರಿಗೆ ಹಾಗೂ ನ್ಯಾಯಾಧೀಶರಿಗೆ ರಜೆ ಎನ್ನುವುದೇ ಇರುವುದಿಲ್ಲ. ಪ್ರತಿದಿನವೂ ಸೇವೆಯ ದಿನವಾಗಿದೆ. ಕಳೆದ ಕೊರೋನಾ ಅವಧಿಯಲ್ಲೂ ದೇಶದಲ್ಲೇ ರಾಜ್ಯದ ನ್ಯಾಯಾಲಯಗಳು ಮಾತ್ರ ಕಾರ್ಯನಿರ್ವಹಿಸಿವೆ. ಬಡಪಾಯಿಗಳಿಗೆ ನ್ಯಾಯ ಪಡೆಯಲು ತೊಂದರೆಯಾಗದಂತೆ ಕಲಾಪಗಳನ್ನು ನಾವು ನಡೆಸುತ್ತಿದ್ದೇವೆ ಎಂದು ನ್ಯಾಯಮೂರ್ತಿ ನಟರಾಜನ್ ಹೇಳಿದರು.

ಪಟ್ಟಣದ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಕಾರ್ಯವೈಖರಿ  ಹಾಗೂ ಸಮಾರಂಭದ ಬಗ್ಗೆ ಈ ಸಂದರ್ಭದಲ್ಲಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಪ್ರಭು ಬಡಿಗೇರ್, ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶ ಜಿ. ತಿಮ್ಮಯ್ಯ ಹಾಗೂ ಎಪಿಪಿ ರೂಪ ಮತ್ತು ವಕೀಲ ಸಂಘದ ಸದಸ್ಯರು ಇದ್ದರು.

ಜಗಳೂರಿನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಭಾನುವಾರ ಭೇಟಿ ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿ ನಟರಾಜನ್ ಮಾತನಾಡಿದರು. ನ್ಯಾಯಾಧೀಶರಾದ ಪ್ರಭು ಬಡಿಗೇರ್, ಜಿ. ತಿಮ್ಮಯ್ಯ ಇದ್ದರು.Attachments area

ReplyReply to allForward