ಸಿಲಿಕಾನ್ ಸಿಟಿಯಲ್ಲಿ ಮಳೆ ಜನಜೀವನ ಅಸ್ತವ್ಯಸ್ತ

ಬೆಂಗಳೂರು, ಆ.೪- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಮಳೆಯ ಆರ್ಭಟ ಮುಂದುವರೆದಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕೆಲಸಕ್ಕೆ ತೆರಳುವವರು ವಾಹನ ಸವಾರರು ಪರದಾಡುವಂತಾಯಿತು.
ಪ್ರಮುಖ ರಸ್ತೆಗಳ ತುಂಬೆಲ್ಲ ನೀರು ನಿಂತು ಜನ, ವಾಹನ ಸಂಚಾರಕ್ಕೆ ಅಡೆತಡೆಯಾದರೆ, ವ್ಯಾಪಾರ, ವಹಿವಾಟಿಗೂ ತೊಂದರೆಯಾಯಿತು.ಇನ್ನೂ, ಅತಿಯಾದ ಮಳೆ ಕಾರಣ ನಾಳೆಯ ವರಮಹಾಲಕ್ಷ್ಮೀ ಹಬ್ಬದ ಆಚರಣೆಗೂ ತೊಡಕಾಯಿತು. ವಸ್ತು, ಪೂಜಾ ಸಾಮಗ್ರಿಗಳನ್ನು ಖರೀದಿಸಲು ಮಳೆ ಬಿಡುವು ನೀಡದ ಕಾರಣ ಮನೆಯಲ್ಲೇ ಬಹುತೇಕರು ಕಾಲಕಳೆದರು.
ಗೋಡೆ ಕುಸಿತ: ಸಂಪಗಿರಾಮ ನಗರದಲ್ಲಿ ರಾತ್ರಿ ಮಳೆಗೆ ಮನೆಯ ಸಂಪೂರ್ಣ ಗೋಡೆ ಕುಸಿತವಾಗಿದ್ದು, ಯಾವುದೇ ಪ್ರಾಣಹಾನಿ ಆಗಿಲ್ಲ. ಮಳೆ ನೀರಿನಿಂದ ಎಚ್ಚೆತ್ತ ಕುಟುಂಬ ಸದಸ್ಯರು ತಕ್ಷಣ ಮನೆಯಿಂದ ಆಚೆ ಬಂದಿದ್ದು, ಭಾರೀ ಅನಾಹುತ ತಪ್ಪಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮನೆ ಮಾಲೀಕ ಚಂದ್ರು, ಮೂರು ದಿನಗಳಿಂದ ಸತತ ಮಳೆಯಿಂದಾಗಿ ಬೆಳಗ್ಗೆ ಸುಮಾರು ೯.೩೦ ಕ್ಕೆ ಮನೆ ಕುಸಿದಿದೆ. ಮನೆ ಕುಸಿಯುವ ಮಗ ಮನೆಯಲ್ಲಿ ಮಲಗಿದ್ದ. ಗೋಡೆ ಬೀಳುವ ಶಬ್ದ ಕೇಳಿ ಆಚೆ ಬಂದಿದ್ದಾನೆ ಎಂದರು.
ಇಲ್ಲಿಯವರೆಗೂ ಬಿಬಿಎಂಪಿ ಅಧಿಕಾರಿಗಳು , ಶಾಸಕರು ಯಾರು ಭೇಟಿ ನೀಡಿ ಸಮಸ್ಯೆ ಕೇಳಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನೌಕರನಿಗೆ ಗಾಯ: ಇನ್ನೂ, ಮತ್ತೊಂದು ಘಟನೆಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ರಸ್ತೆ ಹೊಳೆಯಂತಾಗಿವೆ. ರಸ್ತೆಯಲ್ಲಿ ಸಂಚರಿಸುವಾಗ ನೀರು ಜಾಸ್ತಿ ರಸ್ತೆಗೆ ಬಂದ ಕಾರಣ ದ್ವಿಚಕ್ರ ವಾಹನ ಸವಾರ ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ.
ವೆಂಕಟೇಶ್ ಎಂಬ ಸರ್ಕಾರಿ ನೌಕರ ನಿನ್ನೆ ಕೆಲಸ ಮುಗಿಸಿ ಮನೆ ಕಡೆ ಹೋಗುವಾಗ ಈ ಅವಘಡ ಸಂಭವಿಸಿದೆ. ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಹತ್ತಿರ ಹೋಗುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದ್ದು ಹಿಮ್ಮಡಿ ಭಾಗ ಒಡೆದು ಹೋಗಿ ೨೨ ಹೊಲಿಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ.

ಭಾರೀ ಮಳೆಯಿಂದಾಗಿ ಬೆಂಗಳೂರಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿದೆ.

ಗುರುವಾರ ನಗರದ ರಾಜರಾಜೇಶ್ವರಿ, ಆರ್ ಟಿ ನಗರದಲ್ಲಿ ಅತ್ಯಧಿಕ ಮಳೆಯಾಗಿದೆ. ನಾಯಂಡಹಳ್ಳಿ, ಉತ್ತರಹಳ್ಳಿ, ವಿದ್ಯಾಪೀಠ, ಜಯನಗರ, ಗೊಟ್ಟಿಗೆರೆ, ನಾಗರಬಾವಿ, ಕೆಂಗೇರಿ, ಗಾಳಿ ಆಂಜನೇಯ ದೇವಸ್ಥಾನ, ಸಂಪಂಗಿರಾಮನಗರದಲ್ಲಿ ಹೆಚ್ಚು ಮಳೆಯಾಗಿದೆ. ಉಳಿದ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.ಇನ್ನೂ, ಕೆ.ಆರ್. ಪುರ ವ್ಯಾಪ್ತಿಯ ಸಾಯಿ, ಗುರುರಾಜ ಬಡಾವಣೆ ಸೇರಿ ಸುತ್ತ
ಮುತ್ತಲಿನ ಐದು ಬಡಾವಣೆಗಳಿಗೆ ಮಳೆ ನೀರು ನುಗ್ಗಿದೆ. ಹೊರಮಾವು ಪ್ರದೇಶಗಳಲ್ಲೂ ಮನೆಗಳಿಗೆ ನೀರು ತುಂಬಿದೆ. ರೈಲ್ವೆ ಸೇತುವೆ ಸಮೀಪದ ರಾಜಕಾಲುವೆ ಸಮಸ್ಯೆಯಿಂದಾಗಿ ನೀರು ನುಗ್ಗಿದೆ.ಬೆಂಗಳೂರು ನಗರ ವ್ಯಾಪ್ಯಿಯಲ್ಲಿರುವ ಬಹುತೇಕ ಎಲ್ಲಾ ೨೦೧ ಕೆರೆಗಳು ತುಂಬಿ ಹರಿಯುತ್ತಿವೆ.ಆದರೆ, ಹೆಚ್ಚುವರಿಯಾಗಿ ಸುರಿದ ಮಳೆ ನೀರಿನ್ನು ಹೊರಹಾಕಲು ನಗರದ ಚರಂಡಿಗಳು ಅಸಮರ್ಪಕವಾಗಿದ್ದರಿಂದ ಹೆಚ್ಚಿನ ಸಂಖ್ಯೆಯ ರಸ್ತೆಗಳು ಹೊಳೆಗಳಾಗಿ ಮಾರ್ಪಟ್ಟು, ಕೆಲವೆಡೆ ಸಂಚಾರ ಸ್ಥಗಿತಗೊಂಡಿದೆ.
ದೀರ್ಘವಾಗಿ ಸುರಿದ ಮಳೆಗೆ ಹಲವಾರು ಮರದ ರೆಂಬೆ, ಕೊಂಬೆಗಳು ಮರಿದಿದ್ದವು ತಕ್ಷಣಕ್ಕೆ ಇವುಗಳ ವಿಲೇವಾರಿಯಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

“ನಮಸ್ಕಾರ ಸರ್” ಇತ್ತ ನೋಡಿ..!
ನಿರಂತರ ಮಳೆಯಿಂದ ಬೇಸತ್ತಿರುವ ಬೆಂಗಳೂರಿಗಳು ರಸ್ತೆ, ಮೂಲಸೌಕರ್ಯ ಒದಗಿಸುವಂತೆ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿದ್ದು, ’ನಮಸ್ಕಾರ ಸರ್’ ಇತ್ತ ನೋಡಿ ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿಗೂಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ನಗರ ಪೊಲೀಸ್,ಬಿಬಿಎಂಪಿ ಗೆ ದೂರುಗಳನ್ನು ಸಲ್ಲಿಸಿರುವ ನಾಗರೀಕರು, ಅವ್ಯವಸ್ಥೆ ಕುರಿತು ಗಮನ ನೀಡುವಂತೆ ಕೇಳಿಕೊಂಡಿದ್ದಾರೆ.
ಪ್ರಮುಖವಾಗಿ ಒಬ್ಬರು, ಜಲಾವೃತಗೊಂಡ ರಸ್ತೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ .ಜತೆಗೆ, ಒಳಚರಂಡಿ ವ್ಯವಸ್ಥೆಯ ಕೊರತೆಯ ಬಗ್ಗೆ ವಿಷಾದಿಸಿದರು.
ಸರ್ಜಾಪುರ ರಸ್ತೆಯಲ್ಲಿರುವ ಮಕ್ಕಳು ಶಾಲೆಗೆ ಹೋಗುವ ದಾರಿಯಲ್ಲಿ ಜಲಾವೃತವಾದ ಬೀದಿಗಳಲ್ಲಿ ಸಂಚರಿಸಲು ಟ್ರ್ಯಾಕ್ಟರ್‌ನಲ್ಲಿ ಸವಾರಿ ಮಾಡುವ ವೀಡಿಯೊವೊಂದು ವೈರಲ್ ಆಗಿದೆ. ಮತ್ತೊಬ್ಬ ಮಳೆ ನೀರಿನಲ್ಲಿ ಕಾರು ಮುಳುಗುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.