ಸಿಲಿಕಾನ್‌ಸಿಟಿಯಲ್ಲಿ ಮಳೆಯ ಸಿಂಚನ

ಬೆಂಗಳೂರು, ಅ. ೩೦-ಕಳೆದ ಕೆಲದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ನಿನ್ನೆ ಮತ್ತೆ ಬೆಂಗಳೂರು ಸೇರಿದಂತೆ ಹಲವೆಡೆ ಅಬ್ಬರಿಸಿದೆ.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದರು. ಈ ಬಳಿಕ ಮಳೆ ಬಿಡುವು ಕೊಟ್ಟಿತ್ತು. ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದಂತ ಮಳೆ ನಿನ್ನೆ ಮತ್ತೆ ನಗರದೆಲ್ಲೆಡೆ ಸುರಿದಿದ್ದು, ನವೆಂಬರ್ ೨ರಿಂದ ಮತ್ತೆ ರಾಜ್ಯದಲ್ಲಿ ಮಳೆ ಆರ್ಭಟ ಆರಂಭಗೊಳ್ಳಲಿದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹಿಂಗಾರು ಆಗಮನದ ಹಿನ್ನಲೆಯಲ್ಲಿ ನವೆಂಬರ್ ೨ರಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಕೊಡಗು, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ನವೆಂಬರ್ ೨ರಿಂದ ಚಾಮರಾಜನಗರ, ಕೋಲಾರ, ತುಮಕೂರು, ರಾಮನಗರ, ಬೆಂಗಳೂರು ಸಿಟಿ, ಗ್ರಾಮಾತಂರ ಹಾಗೂ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಕಾರಣ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಇನ್ನು ಶನಿವಾರ ಸಂಜೆ ಶುರುವಾದ ತುಂತುರು ಮಳೆ ರಾತ್ರಿಯೆಲ್ಲಾ ಸುರಿದಿದೆ. ಇಂದು ರಾಜಧಾನಿ ಸೇರಿದಂತೆ ಸುತ್ತಲಿನ ಪರಿಸರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲ್ಲಲ್ಲಿ ಚದುರಿದ ಮಳೆಯ ಸಿಂಚನ ಇರಲಿದೆ.
ಇನ್ನು ಉತ್ತರ ಒಳನಾಡಿನಲ್ಲಿ ಚಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಒಣಹವೆ ಇರಲಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿಯೂ ಈ ಬಾರಿ ಉತ್ತಮ ಮಳೆಯಾಗಿದೆ. ಕೆಆರ್‌ಎಸ್ ಸೇರಿದಂತೆ ದಕ್ಷಿಣ ಒಳನಾಡು ಭಾಗದ ಜಲಾಶಯಗಳು ಭರ್ತಿಯಾಗಿವೆ.
ಭಾರತದ ರಾಜ್ಯಗಳಲ್ಲಿ ಈಶಾನ್ಯ ಮಾರುತಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದಕ್ಕೆ ಪೂರಕವಾದ ವಾತಾವರಣ ಈ ಈಗಾಗಲೇ ನಿರ್ಮಾಣವಾಗಿದ್ದು, ಗುಡುಗು ಸಹಿತ ಹಗುರದಿಂದ ಸಾಧಾರಣವಾಗಿ ಮಳೆ ಬರಲಿದೆ ಎಂದು ಮಳೆ ಮುನ್ಸೂಚನೆ ವರದಿ ತಿಳಿಸಿದೆ. ನವೆಂಬರ್ ೧ರವರೆಗೆ ಮೂರು ದಿನ ಅವಧಿಯಲ್ಲಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಚದುರಿದಂತೆ ಬಹಳಷ್ಟು ಕಡೆಗಳಲ್ಲಿ ಮಳೆ ಆಗಲಿದೆ. ಕೆಲವು ಕಡೆಗಳಲ್ಲಿ ಜೋರು ಮಳೆ ಆಗುವ ಸಂಭವವಿದೆ. ನವೆಂಬರ್ ೧ರವರೆಗೆ ಕೇರಳ ಮತ್ತು ಮಾಹೆಯಲ್ಲಿ, ಅಕ್ಟೋಬರ್ ೩೧ ಮತ್ತು ನವೆಂಬರ್ ೧ರಂದು ಕರಾವಳಿ ಆಂಧ್ರ ಪ್ರದೇಶ ಮತ್ತು ಯಾನಂ ಹಾಗೂ ರಾಯಲಸೀಮಾದ ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆ ಆಗಲಿದೆ.