ಸಿಲಿಂಡರ್ ಸ್ಫೋಟ, 7 ಮಂದಿಗೆ ಗಾಯ, ಐದು ಮನೆ ಛಿದ್ರ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜ.೧೬-ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿ ಏಳು ಮಂದಿ ಗಂಭೀರ ಗಾಯಗೊಂಡು ಐದು ಮನೆಗಳು ಛಿದ್ರಗೊಂಡಿರುವ ಘಟನೆ ಯಲಹಂಕದ ಲಾಲ್‌ಬಹದ್ದೂರ್ ಶಾಸ್ತ್ರಿ ಬಡಾವಣೆಯಲ್ಲಿ ಸಂಭವಿಸಿದೆ.
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸ್ಪೋಟದ ತೀವ್ರತೆಗೆ ಐದು ಮನೆಗಳು ಹಾನಿಯಾಗಿದ್ದರೆ, ಸಿಲಿಂಡರ್ ಸ್ಫೋಟಗೊಂಡ ಮನೆಯ ಇಟ್ಟಿಗೆ ಗೋಡೆಗಳೇ ಕುಸಿದುಬಿದ್ದಿವೆ.
ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲ್‌ಬಹದ್ದೂರ್ ಶಾಸ್ತ್ರಿನಗರದ ಪಸೀಯಾ ಬಾನು (೫೦), ಸಲ್ಮಾ (೨೨), ಶಾಹಿದ್ (೧೬), ಅಸ್ಮಾ (೫೦) ಅಫ್ರೋಜ್ (೨೩) ಸ್ಥಳೀಯ ಅವರ ಸ್ಥಿತಿ ಗಂಭೀರವಾಗಿದೆ.
ಸ್ಫೋಟದ ತೀವ್ರತೆಗೆ ಲಾಲ್‌ಬಹದ್ದೂರ್ ಶಾಸ್ತ್ರಿ ನಗರದ ಜನತೆ ಬೆಚ್ಚಿಬಿದ್ದರು. ಅಕ್ಕ ಪಕ್ಕದ ಮೂರು ಮನೆಗಳಿಗೆ ಡ್ಯಾಮೇಜ್ ಆಗಿದೆ.
ಸ್ಫೋಟದ ಪರಿಣಾಮ ಒಂದೇ ಕುಟುಂಬದ ಏಳು ಮಂದಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸುದ್ದಿ ತಿಳಿದ ಸ್ಥಳಕ್ಕೆ ಧಾವಿಸಿರುವ ಯಲಹಂಕ ನ್ಯೂ ಟೌನ್ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.